ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನ ಆದ್ಯತೆ

ಬೆಂಗಳೂರು:

     ಸ್ವಚ್ಛ ಭಾರತ ಅಭಿಯಾನದಲ್ಲಿ ಮೊದಲು ಆರ್ಥಿಕ ಸ್ವಚ್ಛತೆಯಾಗಬೇಕಿದ್ದು, ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನ ಆದ್ಯತೆ ದೊರೆಯಬೇಕು ಎಂದು ರಾಜ್ಯ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಗಂಗಾವತಿ ಅರಳಿ ನಾಗರಾಜ್ ಹೇಳಿದ್ದಾರೆ.

     ರಾಷ್ಟ್ರೀಯ ಚಾಲಕರ ಒಕ್ಕೂಟದಿಂದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 112ನೇ ಜಯಂತೋತ್ಸವದ ಅಂಗವಾಗಿ ಏರ್ಪಡಿಸಿದ್ದ “ ಆಧುನಿಕ ಭಾರತದಲ್ಲಿ ದೇಶ ಪ್ರೇಮ “ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆಗೆ ಯಾವುದೇ ಸರ್ಕಾರಗಳು ಆದ್ಯತೆ ನೀಡುತ್ತಿಲ್ಲ. ಈ ಪಿಡುಗು ದಿನೇ ದಿನೇ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ ಎಂದರು.

      ಮದ್ಯದ ಉದ್ಯಮಿ ವಿಜಯ್ ಮಲ್ಯ ಬ್ಯಾಂಕ್‍ಗಳಿಗೆ 9 ಸಾವಿರ ಕೋಟಿ ರೂ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಇದೇ ರೀತಿ ಹಲವು ಉದ್ಯಮಿಗಳ ವಂಚನೆಯ ಸರಮಾಲೆಯೇ ಬೆಳಕಿಗೆ ಬರುತ್ತಿದೆ. ಆದರೆ ವಿಜಯ್ ಮಲ್ಯ ರಾಜ್ಯ ಸಭೆ ಸದಸ್ಯರಾಗಿದ್ದರು. ಇಂತಹ ವ್ಯಕ್ತಿ ದೇಶ ಭ್ರಷ್ಟನಾಗಿದ್ದಾನೆ. ಲಂಡನ್‍ನಲ್ಲಿದ್ದುಕೊಂಡು ಇಲ್ಲಿನ ಜೈಲುಗಳು ವಾಸ ಯೋಗ್ಯವಾಗಿಲ್ಲ ಎಂದು ಆರೋಪ ಮಾಡುತ್ತಾನೆ. ನಿಜವಾದ ದೇಶದ್ರೋಹಿ ಎಂದರೆ ಈತನೇ ಎಂದು ಕಿಡಿ ಕಾರಿದರು.

      ಇನ್ನು ವಿಜಯ್ ಮಲ್ಯನನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದ ಶಾಸಕರು ಕೂಡ ಭ್ರಷ್ಟರು. ಯಾವ ಗುಣ ನೋಡಿ ಈತನನ್ನು ರಾಜ್ಯಸಭೆಗೆ ಆರಿಸಿದರು. ಇದರ ಹಿಂದೆ ಯವ ಉದ್ದೇಶವಿದೆ ಎಂದು ನ್ಯಾಯಮೂರ್ತಿ ಅರಳಿ ನಾಗರಾಜ್, ಇಂತಹ ಶಾಸಕರನ್ನು ಆರಿಸಿದ ಮತದಾರರು ಕೂಡ ಭ್ರಷ್ಟರಲ್ಲವೇ ಎಂದು ಪ್ರಶ್ನಿಸಿದರು.

      ಮತದಾರರನ್ನು ರಾಜಕಾರಣಿಗಳು ಭ್ರಷ್ಟರನ್ನಾಗಿ ಮಾಡಿದ್ದು, ಮತದಾರರನ್ನು ಜಾಗೃತಗೊಳಿಸಿದ ಹೊರತು ವ್ಯವಸ್ಥೆಯಲ್ಲಿ ಬದಲಾವಣೆಯಾಗುವುದಿಲ್ಲ. ದೇಶದ ಶೇ 30 ರಷ್ಟು ಶಾಸಕರು, ಸಂಸದರು ಅಪರಾಧ ಹಿನ್ನೆಲೆಯವರು. ಇಂತಹವರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.

    ಶಾಸಕಾಂಗದ ಜತೆಗೆ ನ್ಯಾಯಾಂಗ ಕೂಡ ಭ್ರಷ್ಟವಾಗಿದೆ. ವಕೀಲರ ಸಂಘದ ಚುನಾವಣೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡುವ ಪರಿಸ್ಥಿತಿ ಇದೆ. ಇಂತಹವರಿಂದ ಯಾವ ಸಮಾಜ ಉದ್ಧಾರವಾಗುತ್ತದೆ. ಆದರೆ ಪತ್ರಿಕಾರ ರಂಗ ಇಷ್ಟೊಂದು ಕೆಟ್ಟಿದೆಯೋ ಇಲ್ಲವೋ ತಮಗೆ ತಿಳಿದಿಲ್ಲ. ಆ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ ಎಂದು ಹೇಳಿದರು.

    ಬಾಹ್ಯ ಶತ್ರುಗಳಿಗಿಂತ ಆಂತರಿಕವಾಗಿರುವ ಶತ್ರುಗಳಾದ ಜಾತೀಯತೆ, ಭ್ರಷ್ಟಾಚಾರ, ವರದಕ್ಷಿಣೆ ಮತ್ತಿತರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲುಗಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿದ್ದರೂ ಇನ್ನೂ ಹಲವು ಜ್ವಲಂತ ಸಮಸ್ಯೆಗಳು ಜೀವಂತವಾಗಿರುವುದು ಬಹುದೊಡ್ಡ ದುರಂತ ಎಂದು ನ್ಯಾಯಮೂರ್ತಿ ಅರಳಿ ನಾಜಗರಾಜ್ ಹೇಳಿದರು.

    ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿ ಜೀವನ್ಮರಣದ ನಡುವೆ ಹೋರಾಡಿ ಬದುಕುಳಿದಿರುವ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ಹಿಂದೆ ಸ್ವಾತಂತ್ರ್ಯ ಹೋರಾಟಗಾರರಿಗೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿದ್ದರು. ಶತ್ರುಗಳನ್ನು ಎದುರು ಸೈನಿಕರು ನಿಂತು ಹೋರಾಟ ಮಾಡಬಹುದು. ಆದರೆ ಒಳಗಿನ ಶತ್ರುಗಳ ವಿರುದ್ಧ ಹೋರಾಟ ಕಷ್ಟ ಸಾಧ್ಯ ಎಂದು ಹೇಳಿದರು.

    ಚಲನಚಿತ್ರ ರಂಗದ ಸಂಗೀತ ನಿರ್ದೇಶಕ ವಿ. ಮನೋಹರ್, ನಟ ಕೃಪಾಕರ, ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link