ರಾಣಿಬೆನ್ನೂರ:
ಇಲ್ಲಿನ ವಿರಾಟ್ ಹಿಂದೂ ವಿರಾಟ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ಏಕಾಏಕಿ ಮುಸ್ಲಿಂ ಯುವಕರ ತಂಡ ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ಹೊಡಿ-ಬಡಿ ಮಾಡಿದ ಘಟನೆ ಗುರುವಾರ ತಡ ರಾತ್ರಿ ಗುತ್ತಲ ಬಸ್ ನಿಲ್ದಾಣದ ಬಳಿ ನಡೆದಿದ್ದು, ಘಟನೆಗೆ ಸಂಭಂಧಿಸಿದಂತೆ ಮುಸ್ಲಿಂ ಸಮಾಜದ 9 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮೆರವಣಿಗೆಯು ಟಾಂಗಾ ಕೂಟದ ಮಸೀದಿ ದಾಟಿ ಮುಂದೆ ಹೋದಾಗ ಮೆರವಣಿಗೆ ನೋಡಿ ವಾಪಸ್ಸು ತೆರಳುವ ವೇಳೆ ಈ ಘಟನೆ ನಡೆದಿದೆ. ಗಲಾಟೆ ನಡೆದ ಸುದ್ದಿ ತಿಳಿದ ವಿರಾಟ್ ಹಿಂದೂ ಗಣೇಶ ಪ್ರತಿಷ್ಠಾಪನೆ ಯುವಕರು ಹಾಗೂ ಜನತೆ ಗಣೇಶ ಮೂರ್ತಿಯ ಮೆರವಣಿಗೆಯನ್ನು ಕುರುಬಗೇರಿ ವೃತ್ತದ ಬಳಿ ಬಿಟ್ಟು ಹಲ್ಲೆ ನಡೆಸಿದವರನ್ನು ಬಂಧಿಸಿ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪಟ್ಟು ಹಿಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ ಜಗದೀಶ್ ಹಾಗೂ ಪೊಲೀಸ್ ಸಿಬ್ಬಂಧಿ ಅವರು ಘಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಅವರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಎರಡು ಕೋಮಿನ ಮುಖಂಡರನ್ನು ಶಹರ ಠಾಣೆಗೆ ಕರೆಸಿ ಸಂಧಾನ ನಡೆಸಿ, ಕೆಲ ಗಂಟೆಗಳ ಕಾಲ ತೀವ್ರವಾಗಿ ಚರ್ಚೆ ನಡೆಸಿದರು. ಗಣೇಶ ವಿಸರ್ಜನೆ ವೇಳೆ ಹಲ್ಲೆ ನಡೆಸಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಧಾನ ಸಫಲಗೊಂಡ ನಂತರ ಮುಸ್ಲಿಂ ಸಮಾಜದ 9 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೆಚ್ಚುವರಿ ವರಿಷ್ಠಾಧಿಕಾರಿ ಜಿ.ಜೆ.ಜಗದೀಶ ನಗರದಲ್ಲಿಯೇ ಮೊಕ್ಕಾಂ ಹೂಡಿ, ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








