ದಾವಣಗೆರೆ :
ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ರವರಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 80 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ, ಅದೇ ರೀತಿ ಅಂದಾಜು 65 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ನಾಟಿ ಮಾಡಲಾಗಿದೆ, ಮೆಕ್ಕೆಜೋಳ ಸೊಂಪಾಗಿ ಬೆಳೆದು ತೆನೆಯಲ್ಲಿ ಕಾಳು ಕಟ್ಟುವ ಸಮಯದಲ್ಲಿ ಮಳೆ ಬಾರದೇ ಇದ್ದುದರಿಂದ ರೈತರ ಹಾಗೂ ಇಲಾಖೆಯ ನಿರೀಕ್ಷೆಯಂತೆ ಇಳುವರಿ ಪಡೆಯಲು ಸಾದ್ಯವಾಗುತ್ತಿಲ್ಲ.
ಪ್ರತಿ ಎಕರೆಗೆ ಕೇವಲ 5 ರಿಂದ 6 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆಯಿದೆ, ಇಳುವರಿ ಈ ರೀತಿ ಇದ್ದಾಗ ಸೂಕ್ತ ಬೆಲೆಯೂ ಕೂಡ ರೈತರಿಗೆ ಸಿಗದೇ ಇದ್ದರೆ ಘೋರ ಅನ್ಯಾಯವಾಗುತ್ತದೆ ಅಲ್ಲದೇ ರೈತರು ಸಾಲಬಾದೆಯಿಂದ ಆತ್ಮಹತ್ಯೆ ಬಗ್ಗೆ ಯೋಚಿಸುವ ಹಂತಕ್ಕೂ ಹೋಗಬಹುದು.
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ರೂ.1400 ದಿಂದ ರೂ.1450 ಇದೆ, ಭತ್ತವೂ ಸಹ ಮಾರುಕಟ್ಟೆಯಲ್ಲಿ ಪ್ರತಿಕ್ವಿಂಟಾಲ್‍ಗೆ ರೂ. 1400 ರಿಂದ 1500 ಇದೆ, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಇತ್ತೀಚಿಗೆ ಕನಿಷ್ಟ ಬೆಂಬಲಬೆಲೆ ನಿಗಧಿಪಡಿಸಿ ನೀಡಿರುವ ನಿರ್ದೇಶನದಂತೆ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಗತ್ಯಕ್ಕನುಗುಣವಾಗಿ ಶೀಘ್ರವಾಗಿ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮೆಕ್ಕೆಜೋಳ ಸಾರ್ವಜನಿಕ ವಿತರಣೆ ಪದ್ದತಿಯಲ್ಲಿ (ಪಡಿತರ ವ್ಯವಸ್ಥೆಯಲ್ಲಿ) ಇಲ್ಲದೇ ಇರುವ ಕಾರಣ ಕನಿಷ್ಟ ಬೆಂಬಲ ಯೋಜನೆಯಡಿ ಖರೀದಿ ಮಾಡಲು ಅನುವಾಗುವಂತೆ ಮೆಕ್ಕೆಜೋಳವನ್ನು ಸಾರ್ವಜನಿಕ ವಿತರಣೆ ಪದ್ದತಿಯಡಿ ಸೇರ್ಪಡೆ ಮಾಡಿಕೊಂಡು ಖರೀದಿ ಕೇಂದ್ರಗಳ ಮೂಲಕ ಮೆಕ್ಕೆಜೋಳವನ್ನು ಕನಿಷ್ಟ ಬೆಂಬಲ ದರದಡಿ ಖರೀದಿ ಮಾಡಲು ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಪತ್ರದ ಮೂಲಕ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ