ಚಳ್ಳಕೆರೆ
ನಗರಸಭೆ ಚುನಾವಣೆ ನಡೆದು ಈಗಾಗಲೇ ಫಲಿತಾಂಶವೂ ಸಹ ಹೊರಬಿದಿದ್ದು, ಚಳ್ಳಕೆರೆ ನಗರಸಭೆ ಆಡಳಿತವನ್ನು ಕಾಂಗ್ರೆಸ್ ಪಕ್ಷವೇ ವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ದೊರಕಿದ್ದು, ಅಧ್ಯಕ್ಷರಾಗುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ನಿರಂತರವಾಗಿ ಒತ್ತಾಯಗಳು ಮೇಲಿಂದ ಮೇಲೆ ಬರುತ್ತಿದ್ದು ಆದರೆ, ಅಧ್ಯಕ್ಷ ಸ್ಥಾನ ಮೀಸಲಾತಿ ಕುರಿತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಜೂನ್ 4ಕ್ಕೆ ಅಂತಿಮ ನಿರ್ಧಾರವಾಗುವ ಲಕ್ಷಣಗಳು ಗೋಚರಿಸಿವೆ.
ಚಳ್ಳಕೆರೆ ನಗರಸಭೆಯಲ್ಲಿ 31 ಸದಸ್ಯರು ಆಯ್ಕೆಯಾಗಿದ್ದು 3 ಸದಸ್ಯರು ಪುನರಾಯ್ಕೆಯಾಗಿದ್ದರೆ, ಒರ್ವ ಸದಸ್ಯ ಮಾತ್ರ ಎರಡು ಅವಧಿಯ ನಂತರ ಮತ್ತೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ಧಾರೆ. ಇದನ್ನು ಹೊರತು ಪಡಿಸಿದರೆ 27 ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರ ಮೀಸಲಾತಿ ಹಿನ್ನೆಲೆಯಲ್ಲಿ ಇನ್ನೂ ನಗರಸಭೆಯ ಆಡಳಿತವನ್ನು ವಹಿಸಿಕೊಳ್ಳುವ ಕ್ರಮಕ್ಕೆ ಹಿನ್ನಡೆ ಉಂಟಾಗುತ್ತಿದೆ.
ಕಳೆದ 2013ರಲ್ಲಿ ನಡೆದ ಅಂದಿನ ಚುನಾವಣೆಯ ನಂತರ ಸರಿ ಸುಮಾರು 6 ತಿಂಗಳ ಕಾಲ ಅಧ್ಯಕ್ಷ ಮೀಸಲಾತಿಯ ಹಿನ್ನೆಲೆಯಲ್ಲಿ ಅಂದು ಆಯ್ಕೆಯಾದ 27 ಸದಸ್ಯರು ಸಹ ಅಧಿಕಾರವನ್ನು ಪಡೆಯಲು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ವರ್ಷ ನಡೆದ ನಗರಸಭಾ ಚುನಾವಣೆಯಲ್ಲಿ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಲಿದೆಯೇ ಎಂಬ ಆತಂಕ ಎಲ್ಲಾ ಸದಸ್ಯರಲ್ಲಿ ಮನೆ ಮಾಡಿದೆ. ಅಧ್ಯಕ್ಷ ಸ್ಥಾನ ಮೀಸಲಾತಿ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಬೇಗನೆ ಮುಗಿದು ಚುನಾಯಿತ ಎಲ್ಲರಿಗೂ ಅಧಿಕಾರ ಸಿಕ್ಕಲ್ಲ ಸೇವೆ ಮಾಡಲು ಅನುಕೂಲವಾಗುತ್ತದೆ. ಚಳ್ಳಕೆರೆ ನಗರಸಭೆ ಎಲ್ಲಾ ಚುನಾಯಿತ ಸದಸ್ಯರು ಯುವಕರಿದ್ದು, ಕಾರ್ಯನಿರ್ವಹಿಸುವ ಉತ್ಸಾಹದಲ್ಲಿದ್ದು, ಅವರ ಉತ್ಸಾಹಕ್ಕೆ ಅಧಿಕಾರ ನೀಡುವ ಮೂಲಕ ಶಕ್ತಿ ತುಂಬಲು ವಿಚಾರಣೆ ಬೇಗನೆ ಮುಗಿಯಲಿ ಎಂಬುವುದು ಎಲ್ಲರ ಆಶಯ. .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
