ಹಿರಿಯೂರಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಆಗ್ರಹ

ಚಿತ್ರದುರ್ಗ:

       ಹಿರಿಯೂರು ಪಟ್ಟಣದ ಟಿ.ಬಿ.ಸರ್ಕಲ್‍ನಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಪ್ರತಿಮೆಯನ್ನು ಅನಾವರಣಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

     ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಮಟೆ ಬಾರಿಸಿಕೊಂಡು ಆಗಮಿಸಿದ ಪ್ರತಿಭಟನಾಕಾರರು ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ದಲಿತರು ಇನ್ನು ದಲಿತರಾಗಿಯೇ ಉಳಿದಿದ್ದೇವೆ. ಸಂವಿಧಾನದ ಆಶಯದಡಿ ಸರ್ಕಾರಗಳು ಹಲವಾರು ಯೋಜನೆಗಳನ್ನು ದಲಿತರಿಗಾಗಿ ಜಾರಿಗೆ ತಂದಿದ್ದರೂ ಸಮರ್ಪಕವಾಗಿ ತಲುಪದ ಕಾರಣ ದಿನೇ ದಿನೇ ದಲಿತರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹೆಚ್.ಪ್ರಕಾಶ್‍ಬೀರಾವರ ಮಾತನಾಡಿ ದೇವರಕೊಟ್ಟ ಗ್ರಾಮದ ರಿ.ಸ.ನಂ.34,35,36 ನೇ ಜಮೀನಿನಲ್ಲಿ ಸುಮಾರು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರನ್ನು ಒಕ್ಕಲೆಬ್ಬಿಸದೆ ಸಾಗುವಳಿ ಚೀಟಿ ವಿತರಿಸಬೇಕು. ಇದೇ ಗ್ರಾಮದಲ್ಲಿ ನೌಕರಿಯಲ್ಲಿರುವ ಮನೆಯಲ್ಲಿ ಇಬ್ಬರಿಗೆ ಸಾಗುವಳಿ ಚೀಟಿಗಳನ್ನು ನೀಡಲಾಗಿದೆ. ಕೂಡಲೆ ರದ್ದುಪಡಿಸಿ ಗ್ರಾಮದ ದಲಿತ ವರ್ಗದ ಬಡವರಿಗೆ ಆ ಜಮೀನನ್ನು ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದರು.

     ದೇವರಕೊಟ್ಟ ಗ್ರಾಮಗಳಲ್ಲಿ ಬಹುತೇಕ ಕುಟುಂಬಗಳಿಗೆ ವಾಸಕ್ಕೆ ಮನೆಗಳು ಇಲ್ಲವಾದ್ದರಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಡಬೇಕು. ಹಿರಿಯೂರಿನ ಟಿ.ಬಿ.ಸರ್ಕಲ್‍ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸುವಂತೆ ಕಳೆದ ಹದಿನೈದು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ.

      ಎಸ್.ಎಲ್.ಆರ್. ಖಾಸಗಿ ಕಂಪನಿಯವರು ಹದಿನೈದು ವರ್ಷಗಳ ಹಿಂದೆ ಅಂಬೇಡ್ಕರ್ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದ್ದರೂ ಪ್ರತಿಮೆಯ ಅನಾವರಣಕ್ಕೆ ಕೆಲವು ಪಟ್ಟಭದ್ರರು ಅಡ್ಡಿಯುಂಟು ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಕೂಡಲೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ, ರಸ್ತೆ ತಡೆ, ಹಿರಿಯೂರು ಬಂದ್‍ಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ತಿಮ್ಮರಾಜು, ಗೌರವಾಧ್ಯಕ್ಷ ಅಂಗಡಿ ಮಂಜಣ್ಣ, ಎಂ.ತಿಪ್ಪೇಸ್ವಾಮಿ, ಟಿ.ಚಂದ್ರಪ್ಪ, ಸಾಗಲಗಟ್ಟೆ ಜಯಪ್ಪ, ಎಸ್.ವಿಜಯಕುಮಾರ್, ನೇಹಮಲ್ಲೇಶ್, ಶಿವಕುಮಾರ್ ಓ.ಚೌಳೂರು, ಎಸ್.ಎನ್.ವಿಶ್ವನಾಥ್, ಮಹಮದ್ ಇರ್ಫಾನ್, ಇಮ್ರಾನ್‍ಬೇಗ್, ಲೋಕೇಶ್ ಸಿದ್ದಾಪುರ, ಅನಂತರಾಜು, ಭರತ್, ರಂಗಸ್ವಾಮಿ, ಆರ್.ಬಸವರಾಜು, ಶಿವು, ಸರ್ಪಭೂಷಣ್, ರಾಮಚಂದ್ರ, ಟಿ.ವಿದ್ಯಾದರ್, ಜಿಲ್ಲಾಮಹಿಳಾಧ್ಯಕ್ಷೆ ಎನ್.ವಿಜಯಲಕ್ಷ್ಮಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap