ಚಳ್ಳಕೆರೆ
ರಾಷ್ಟ್ರವೇ ಸದಾಕಾಲ ಹೆಮ್ಮೆ ಪಡುವಂತಹ ಮತ್ತು ಗೌರವದಿಂದ ಬಾಳುವಂತಹ ಮಹಾನ್ ಸೇವೆಯನ್ನು ಮಾಡುವ ಮೂಲಕ ರಾಷ್ಟ್ರಪಿತನೆಂಬ ಹೆಸರಿನ ಮೂಲಕ ಖ್ಯಾತರಾದವರು ಮೋಹನ್ ದಾಸ ಕರ್ಮಚಂದ್ರ ಗಾಂಧಿ. ಮಹಾತ್ಮ ಗಾಂಧೀಜಿ ರಾಷ್ಟ್ರದ ಜನರನ್ನು ಬಿಟ್ರೀಷ್ ಸಾಮ್ರಾಜ್ಯದ ಕಪಿಮುಷ್ಠಿಯಿಂದ ಪಾರು ಮಾಡಿ ದಾಸ್ಯದ ಬದುಕಿನಿಂದ ವಿಮುಕ್ತಿಗೊಳಿಸಿದ ಮಹಾನ್ ಶ್ರೇಷ್ಠ ನಾಯಕ. ಇಂದು ರಾಷ್ಟ್ರದಲ್ಲಿ ರಾಷ್ಟ್ರಪಿತನೆಂಬ ಏಕೈಕ ಹೆಸರು ಮಹಾತ್ಮ ಗಾಂಧೀಜಿಯವರಿಗೆ ಮಾತ್ರ ಸಾಧ್ಯ.
ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರ ನಿರಂತರ ಅಹಿಂಸಾ ಹೋರಾಟ ರಾಷ್ಟ್ರದ ಏಳಿಗಾಗಿ ನಡೆಸಿದ ಚಳುವಳಿಗಳ ಸವಿ ನೆನಪಿಗಾಗಿ ಮತ್ತು ಗಾಂಧೀಜಿಯವರನ್ನು ಸದಾ ಸ್ಮರಿಸುವ ಹಿನ್ನೆಲೆಯಲ್ಲಿ ಇಲ್ಲಿನ ಮಿನಿ ವಿಧಾನ ಸೌಧದ ನೂತನ ಕಟ್ಟಡ ಮುಂದೆ ಅವರ ಪ್ರತಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರದ ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿಯವರ ಸಾಧನೆಯನ್ನು ಮಾಡುವಂತಹ ವ್ಯಕ್ತಿ ಮತ್ತೆ ಹುಟ್ಟಲಾರ. ಕಾರಣ ಬಾಲ್ಯದಿಂದಲೇ ದೇಶ ಸ್ವಾತಂತ್ರ್ಯದ ಬಗ್ಗೆ ಕನಸು ಕಟ್ಟಿಕೊಂಡು ಬಿಟ್ರೀಷರಿಂದ ನಿರಂತರವಾಗಿ ಅಪಮಾನ, ಅವಮಾನಗಳಿಂದ ಜರ್ಜಿತರಾಗಿದ್ದರೂ ವಿಚಲಿತರಾಗದೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ಕೇವಲ ಅಹಿಂಸಾ ಮಾರ್ಗದ ಮೂಲಕವೇ ತಂದುಕೊಟ್ಟ ಶ್ರೇಷ್ಠ ನಾಯಕ ಗಾಂಧೀಜಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸರ್ಕಾರಿ ಹಲವಾರು ಕಾರ್ಯಕ್ರಮಗಳನ್ನು ರಾಷ್ಟ್ರೀಯ ಹಬ್ಬವನ್ನಾಗಿ ರೂಪಿಸಿದ್ದರೂ ಎಲ್ಲವನ್ನೂ ಬದಿಗೊತ್ತಿ ಗೌರವ ಹಾಗೂ ಅಭಿಮಾನದಿಂದ ಆಚರಣೆ ಮಾಡುವ ಕಾರ್ಯಕ್ರವೆಂದರೆ ಗಾಂಧಿ ಜಯಂತಿ. ಮಹಾತ್ಮ ಗಾಂಧೀಜಿಯವರ ದೂರದೃಷ್ಠಿಯ ಫಲವಾಗಿ ಇಂದು ನಾವೆಲ್ಲರೂ ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆಂದರು.
ಕಾರ್ಯಕ್ರಮದ ಬಗ್ಗೆ ಉಪನ್ಯಾಸ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ರಾಷ್ಟ್ರದ ದುರಂತವೆಂದರೆ ದೇಶದ ಜನರಿಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಎಲ್ಲರ ಬದುಕನ್ನು ಅರ್ಥಪೂರ್ಣಗೊಳಿಸಿದ ಮಹಾನ್ ದೇಶ ಭಕ್ತ ಮಹಾತ್ಮ ಗಾಂಧೀಜಿ. ಆದರೆ, ಸ್ವಾತಂತ್ರ್ಯ ಬಂದ ಒಂದೇ ವರ್ಷದಲ್ಲಿ ಅವರು ಗುಂಡಿಗೆ ಬಲಿಯಾಗಿ ಮರಣಹೊಂದಿದರು. ಸ್ವಾತಂತ್ರ್ಯ ಬಂದ ನಂತರ ಕನಿಷ್ಠ ಪಕ್ಷ ಹತ್ತಾರು ವರ್ಷಗಳ ಕಾಲ ಮಾರ್ಗದರ್ಶನ ಮಾಡಿದ್ದಲ್ಲಿ ಈ ರಾಷ್ಟ್ರದ ಪ್ರಗತಿ ಮತ್ತಷ್ಟು ಹೆಚ್ಚುತ್ತಿತ್ತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನೇಪಾಳ ರಾಜ್ಯದ ಕಠ್ಮಂಡುವಿನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 5 ಸಾವಿರ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಬಂಗಾರದ ಪದಕವನ್ನು ಪಡೆದ ತಾಲ್ಲೂಕಿನ ತಳಕು ಹೋಬಳಿಯ ಪಾತಪ್ಪನಗುಡಿಯ ಈ ನಾಗರಾಜು ಯಾದವ್ ರವರನ್ನು ಶಾಸಕ ಟಿ.ರಘುಮೂರ್ತಿ ತಾಲ್ಲೂಕು ಆಡಳಿತದ ಪರವಾಗಿ ಸನ್ಮಾನಿಸಿ ಚಳ್ಳಕೆರೆ ತಾಲ್ಲೂಕಿನ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋದ ಈ ನಾಗರಾಜುರವರ ಕ್ರೀಡಾ ಸ್ಪೂರ್ತಿಯನ್ನು ಪ್ರಶಂಸಿಸಿದರು.
ವಿಧಾನಪರಿಷತ್ ಸದಸ್ಯೆ ಜಯಮ್ಮಬಾಲರಾಜು ಪ್ರಶಸ್ತಿ ಪಡೆದ ಈ.ನಾಗರಾಜುಯಾದವ್ರವರನ್ನು ಸನ್ಮಾನಿಸಿ ಗ್ರಾಮೀಣ ಭಾಗದಲ್ಲಿ ಹುಟ್ಟಿ ತನ್ನದೇಯಾದ ಸಾಧನೆ ಮೂಲಕ ರಾಷ್ಟ್ರ ಮಟ್ಟದ ಕೀರ್ತಿಗೆ ಪಾತ್ರರಾದ ಈ.ನಾಗರಾಜುಯಾದವ್ ಯುವ ಜನತೆಗೆ ಸ್ಪೂರ್ತಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್ಗೌಡ, ಎಂ.ಜೆ.ರಾಘವೇಂದ್ರ, ಜಿ.ಮಲ್ಲಿಕಾರ್ಜುನ, ವೈ.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/2CLK1P.gif)