ಹರಪನಹಳ್ಳಿ 
ಎನ್ಪಿಎಸ್ ಪಿಂಚಣಿ ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ರಕ್ತಕೊಟ್ಟೇವು ಪಿಂಚಣಿ ಬಿಡೆವು ಎಂಬ ಘೋಷಣೆ ಅಡಿಯಲ್ಲಿ ತಾಲೂಕು ಎನ್ಪಿಎಸ್ ನೌಕರರ ಸಂಘದಿಂದ ಪಟ್ಟಣದಲ್ಲಿ ಬುಧುವಾರ ಮೆರವಣಿಗೆ, ರಕ್ತದಾನ ನಡೆಸಲಾಯಿತು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಜಿಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾರವರು ಮಾತನಾಡಿ ಎನ್ಪಿಎಸ್ ನೌಕರರ ಹೋರಾಟ ನ್ಯಾಯಯುತವಾಗಿದ್ದು ಅವರ ಬೇಡಿಕೆಗಳನ್ನು ಈಡೇರಿಸಲು ಸರಕಾರಗಳು ಇಚ್ಛಾಶಕ್ತಿ ತೋರಬೇಕಿದೆ. ಹಳೇ ಪಿಂಚಣಿ ವ್ಯವಸ್ಥೆ ನೌಕರರ ನಿವೃತ್ತಿಯ ನಂತರ ಸಹಕಾರಿಯಾಗಿತ್ತು.
ಇಂದಿನ ನೂತನ ವ್ಯವಸ್ಥೆಯಿಂದ ನೌಕರರಿಗೆ ಅಭದ್ರತೆಯನ್ನು ಸೃಷ್ಠಿಸಿದೆ ಎಂದ ಅವರು ನೌಕರರು ಹಾಗೂ ಜನಪ್ರತಿನಿಧಿಗಳು ಒಂದು ನಾಣ್ಯದ ಎರಡು ಮುಖಗಳು. ನೌಕರರ ಸಮಸ್ಯೆಗಳಿಗೆ ನಾವು ಕೂಡ ಸ್ಪಂದಿಸುವುದಾಗಿ ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ ಮುಖ್ಯಮಂತ್ರಿಗಳಾಗುವ ಮೊದಲು ಕುಮಾರಸ್ವಾಮಿಯವರು ನೌಕರರ ಹಳೇಯ ಪಿಂಚಣಿ ವ್ಯವಸ್ಥೆ ಜಾರಿಗೆ ಮತ್ತು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಅಧಿಕಾರಕ್ಕೆ ಏರಿ ಐದು ತಿಂಗಳು ಆದರೂ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ಪಟ್ಟಣದ ಹಳೇ ಬಸ್ ನಿಲ್ದಾಣ, ಹೊಸಪೇಟೆ ರಸ್ತೆ ಸಾಗಿದ ಪ್ರತಿಭಟನಾಕಾರರು ಐ.ಬಿ.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು ನಂತರ ಮಿನಿವಿಧಾನಸೌಧದಲ್ಲಿ ಉಪತಹಶೀಲ್ದಾರರಿಗೆ ಸಲ್ಲಿಸಿದರು. ತರಳಬಾಳು ಕಲ್ಯಾಣ ಮಂಟಪದಲ್ಲಿ ರಕ್ತದಾನ ನೀಡಿ ತಮ್ಮ ಬೇಡಿಕೆ ಈಡೇರಿಸಲು ಧರಣಿ ಮೂಲಕ ಒತ್ತಾಯಿಸಿದರು.
ಜಿಪಂ ಸದಸ್ಯ ಡಾ.ಮಂಜುನಾಥ ಉತ್ತಂಗಿ, ಸುವರ್ಣ ಆರುಂಡಿ, ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ಸೊಪ್ಪಿನ್, ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ನೌಕರರ ಒಕ್ಕೂಟದ ಆಂಜನೇಯ, ಕಾರ್ಯದರ್ಶಿ ಅಬ್ದುಲ್ ಸಲಾಮ್, ಸಂಗೀತಾ ನೌಕರರ ಸಂಘದ ಪರಿಷತ್ನ ಸಿದ್ದಲಿಂಗನಗೌಡ, ಯಶೋಧರ, ದೇವೆಂದ್ರಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಹೂವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಅಂಜಿನಪ್ಪ, ಬಿ.ರಾಜಶೇಖರ, ಮನೋಹರ್, ಶಶಿಕಲಾ, ಲತಾರಾಥೋಡ, ಜಯಶ್ರೀ, ಷಣ್ಮುಖಪ್ಪ, ಬೆಸ್ಕಾಂ, ಆರೋಗ್ಯ, ಕಂದಾಯ ಸೇರಿದಂತೆ ತಾಲೂಕಿನ ವಿವಿಧ ನೌಕರರು ಈ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







