ದಾವಣಗೆರೆ:
ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸಲು ನವದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ರೈತ ಮುಖಂಡರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಇವರಿಬ್ಬರ ಭಾವಚಿತ್ರ ದಹಿಸುವ ಮೂಲಕ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕೃಷಿ ಸಾಲಮನ್ನಾ, ಕಬ್ಬಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹರಿದ್ವಾರ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಿಂದ ನೂರಾರು ಟ್ರ್ಯಾಕ್ಟರ್‍ಗಳಲ್ಲಿ ದೆಹಲಿಯತ್ತ ಧಾವಿಸುತ್ತಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ.
ಆಗ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಲಾಗಿದೆ. ಲಾಠಿ ಪ್ರಹಾರ ನಡೆಸಿರುವುದು ಮಾತ್ರವಲ್ಲದೇ, ಅಶ್ರುವಾಯು, ಜಲಪಿರಂಗಿಗಳನ್ನು ಬಳಸಿ ರೈತರ ಹೋರಾಟವನ್ನು ದಮನ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೊಲೀಸ್ ಯಂತ್ರಾಂಗವನ್ನು ಬಳಸಿಕೊಂಡಿದೆ ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶತಕೋಟಿ ಬಸಪ್ಪ, ಶಿವಾನಂದಪ್ಪ, ಚೀಲೂರು ಖಲೀಂವುಲ್ಲಾ, ಕಣಿವೆಬಿಳಚಿ ರಂಗಸ್ವಾಮಿ, ಹೊನ್ನೂರು ರಾಜು, ಅಶೋಕ್, ಅಣ್ಣಪ್ಪ, ದಾಗಿನಕಟ್ಟೆ ಬಸವರಾಜ್, ಎಲೋದಳ್ಳಿ ಕಾಳೇಶ್, ಕಣಿವೆಬಿಳಚಿ ಅಣ್ಣಪ್ಪ, ಐಗೂರು ಗೊಲ್ಲರಹಟ್ಟಿ ಈಶ್ವರ್, ಹನುಮೇಶ್ ಮತ್ತಿತರರು ಹಾಜರಿದ್ದರು.
ಜಿಲ್ಲಾಧಿಕಾರಿಗಳಿಗೆ ಮನವಿ: ರೈತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರ ಮೂಲಕ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಹೆಚ್.ಎಂ.ಮಹೇಶ್ವರಸ್ವಾಮಿ, ಜಿಲ್ಲಾಧ್ಯಕ್ಷ ಮಲ್ಲಾಪುರ ದೇವರಾಜ್, ಕೆ.ಎನ್.ಸಿದ್ದೇಶ್, ಮರುಳಸಿದ್ದಪ್ಪ, ನಾಗರಕಟ್ಟೆ ಜಯಾನಾಯ್ಕ, ಮಲ್ಲೇನಹಳ್ಳಿ ಭೀಮಣ್ಣ, ಹುಣಸೇಕಟ್ಟೆ ಕುಬೇರಪ್ಪ, ಚಟ್ನಹಳ್ಳಿ ಬಸವರಾಜ್, ಐಗೂರು ಶಿವಮೂತ್ರ್ಯಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ