ಮಾದಿಗ ಸಮುದಾಯದ ಶಾಸಕರಿಗೆ ಮಂತ್ರಿಗಿರಿ ನೀಡಿ : ಆಂಜನೇಯ

ಬೆಂಗಳೂರು

     ಎ.ಜೆ.ಸದಾಶಿವ ಆಯೋಗ ವರದಿ ಶಿಫಾರಸ್ಸು ವಿಳಂಬ ಹಾಗೂ ಮಾದಿಗ ಸಮುದಾಯದ ಶಾಸಕರಿಗೆ ಮಂತ್ರಿಗಿರಿ ನೀಡಿಲ್ಲ ಎಂದು ಮಾದಿಗ ಸಮಾಜದ ಮುಖಂಡರು, ಸಭೆ ಬಹಿಷ್ಕಾರ ಮಾಡಿ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಆಂಜನೇಯ ಸಂಸದ ಮುನಿಯಪ್ಪ ಸೇರಿ ಹಲವು ನಾಯಕರು ಮುಜುಗರ ಎದುರಿಸಬೇಕಾಯಿತು.

      ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆ ಹಾಗೂ ರಾಜ್ಯ ಮಾದಿಗ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆವಹಿಸಿದ್ದ, ಕಾಂಗ್ರೆಸ್ ಹಿರಿಯ ಮುಖಂಡ ಸಂಸದ ಕೆ.ಹೆಚ್.ಮುನಿಯಪ್ಪ ಸಮ್ಮುಖದಲ್ಲೇ, ಗಲಾಟೆ, ಗದ್ದಲ ಉಂಟಾಯಿತು.

      ಸಭೆಯಲ್ಲಿ ಪ್ರಾಸ್ತಾವಿಕವಾಗಿ ಹೆಚ್.ಆಂಜನೇಯ ಮಾತನಾಡುತ್ತಿದ್ದಾಗ ತೀವ್ರ ವಿರೋಧ ವ್ಯಕ್ತಪಡಿಸಿದ ಮಾದಿಗ ಸಮುದಾಯದ ಮುಖಂಡರು, ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ ಶಾಸಕರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಜೊತೆಗೆ, ಸದಾಶಿವ ಆಯೋಗ ಶಿಫಾರಸ್ಸು ಮಾಡದೆ, ಹಲವು ವರ್ಷಗಳಿಂದ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಗದ್ದಲ ಎಬ್ಬಿಸಿದರು..

      ಇದಕ್ಕೆ ಸಮಜಾಯಿಷಿ ನೀಡಿದ ಆಂಜನೇಯ, ಇದೇ ತಿಂಗಳ 12 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿಯೇ, ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಬೇಡಿಕೆ ಸಲ್ಲಿಸಲಾಗುವುದು.

      ಶಾಸಕಿ ರೂಪಾ, ಸೇರಿದಂತೆ ಇಬ್ಬರಿಗೆ, ಸಚಿವ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಎಲ್ಲರದ್ದು. ಜೊತೆಗೆ, ಸದಾಶಿವ ಆಯೋಗದ ವರದಿಗಾಗಿ ಸರ್ಕಾರದ ಮೇಲೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

     ಮೀಸಲಾತಿಯಲ್ಲೂ ನಮಗೆ ಅನ್ಯಾಯವಾಗಿದೆ. ಇನ್ನೂ, ಪರಿಶಿಷ್ಟ ಜಾತಿಯಲ್ಲಿ, ಮಾದಿಗ ಮತ್ತು ಸಂಬಂಧಿಸಿದ 16 ಜಾತಿಗಳಿವೆ. ಇದರಲ್ಲಿ ಒಟ್ಟು 53 ಉಪ ಜಾತಿಗಳಿವೆ.ಅಲ್ಲದೆ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಬೇಕು.ನಾನು ಹೋರಾಟದಲ್ಲಿದ್ದೇನೆ. ಮಾದಿಗ ಸಮುದಾಯವನ್ನು ಸಂಘಟನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

     ಆದರೆ, ಮಾದಿಗ ಜನಾಂಗ ಮುಖಂಡರು, ಆಂಜನೇಯ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ, ಈ ಆಶ್ವಾಸನೆ ಕೇಳಿ ಸಾಕಾಗಿದೆ.ನಮಗೆ ನ್ಯಾಯಬೇಕು. ಜೊತೆಗೆ, ಪ್ರತಿಭಟನೆ ನಡೆದಾಗ, ಮುಖಂಡರು ಬೆಂಬಲ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಅಂಬೇಡ್ಕರ್ ಭವನದಿಂದ ಹೊರ ನಡೆದರು.

    ಈ ವೇಳೆ, ಮಾಜಿ ಸಚಿವೆ ರೇಣುಕಾ ರಾಜೇಂದ್ರ, ಎಸ್ಸಿ-ಎಸ್ಟಿ ಆಯೋಗದ ಮಾಜಿ ಅಧ್ಯಕ್ಷ ಮುನಿಯಪ್ಪ, ಸೇರಿದಂತೆ ವಿವಿಧ ಸಂಘಟನೆಗಳ ಮಾದಿಗ ಮುಖಂಡರು ಭಾಗಿಯಾಗಿದ್ದರು.

      ಮಾದಿಗ ಸಭೆಗೆ ಬಹಿಷ್ಕಾರ ಹಾಕಿ ಹೊರ ನಟೆಯುತ್ತಿದ್ದ ಮುಖಂಡರನ್ನು ತಡೆದ ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ, ಆದಿಜಾಂಬವ ಅಭಿವೃದ್ಧಿ ನಿಗಮದ ಲೋಕಾರ್ಪಣೆ ದಿನದಂದೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link