ಹುಳಿಯಾರು
ಅಲೆಮಾರಿ ಸಮುದಾಯಗಳ ಮೂಲಭೂತ ಹಕ್ಕುಗಳಿಗೆ ಹಾಗೂ ಇನ್ನಿತರ ಸೌಲಭ್ಯಗಳಿಗೆ ಒತ್ತಾಯಿಸಿ ಹುಳಿಯಾರು ನಾಡ ಕಚೇರಿ ಎದುರು ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳಕ್ಕೆ ಮೂರನೇ ದಿನವಾದ ಗುರುವಾರ ತುಮಕೂರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಭೇಟಿ ನೀಡಿ ಧರಣಿ ನಿರತರೊಂದಿಗೆ ಸಮಾಲೋಚನೆ ನಡೆಸಿದರು.
ಅಲೆಮಾರಿಗಳು ಮತ್ತು ಹಿಂದುಳಿದವರ ಕುಂದುಕೊರತೆ ಸಭೆಯಲ್ಲಿ ಈಗ ನೀವು ಕೇಳಿರುವ ಬೇಡಿಕೆಗಳ ಬಗ್ಗೆ ಚರ್ಚೆಯಾಗಿದೆ. ಅಲೆಮಾರಿಗಳಿಗೆಂದೆ ತುಮಕೂರು ಜಿಲ್ಲೆಯಾದ್ಯಂತ ಈ ಹಿಂದಿನ ಜಿಲ್ಲಾಧಿಕಾರಿಗಳು ಗುರುತುಪಡಿಸಿದ 22 ಎಕರೆಯಷ್ಟು ಜಮೀನನ್ನು ಕಾಯ್ದಿರಿಸಲಾಗಿದೆ. ನಿವೇಶನ ರಚನೆಗೆ ಸಂಬಂಧಿಸಿದಂತೆ ಕಾಯ್ದಿರಿಸಿರುವ ಸ್ಥಳಗಳಲ್ಲಿ ನೆಲ ಸಮತಟ್ಟು ಮಾಡಿ ಅಭಿವೃದ್ಧಿಪಡಿಸಲು ಹಾಗೂ ಲೇಔಟ್ ಮಾಡಿ ನಿವೇಶನ ಸಿದ್ಧಪಡಿಸಿ ಹಕ್ಕುಪತ್ರ ತಯಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವೆ. ಇನ್ನೊಂದು ಒಂದೂವರೆ ತಿಂಗಳಿನೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿದ್ದು ಆದ್ಯತೆ ಮೇರೆಗೆ ವಿತರಿಸಲಾಗುವುದು ಎಂದು ಭರವಸೆ ಇತ್ತರು.
ಹುಳಿಯಾರಿಗೆ ಸಂಬಂಧಪಟ್ಟಂತೆ ಅಲೆಮಾರಿ ಜನಾಂಗದವರು ಸೂಚಿಸಿರುವ ಸ್ಥಳದ ಬಗ್ಗೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿರುವೆ. ಈ ಹಿಂದೆ ನೀವು ಕೇಳಿದ್ದ ಎರಡು ಸರ್ವೆ ನಂಬರ್ ಗೋಮಾಳ ಎಂದಿದ್ದು ಕಾನೂನು ತೊಡಕಿನಿಂದಾಗಿ ಕೋರ್ಟ್ ಮೆಟ್ಟಿಲೇರಿದ್ದು ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿನಲ್ಲಿ ಕೆಲವರು ಸಲ್ಲಿಸಿದ್ದು ಅದನ್ನು ಶೀಘ್ರವೇ ತೆರವುಗೊಳಿಸುವಂತೆ ಸರ್ಕಾರಿ ಅಡ್ವೊಕೇಟ್ ಮೂಲಕ ಸೂಕ್ತದಾಖಲೆಗಳನ್ನು ಸಲ್ಲಿಸಲಾಗಿದೆ. ತಡೆಯಾಜ್ಞೆ ಬೇಗ ತೆರವಾದಲ್ಲಿ ಅದೇ ಜಾಗದಲ್ಲಿ ನಿವೇಶನ ಮಾಡಿ ವಿತರಿಸಲಾಗುತ್ತದೆ. ಇದನ್ನು ಹೊರತುಪಡಿಸಿ ನೀವು ಬೇರೆಡೆ ಎಲ್ಲಾದರೂ ಜಮೀನು ಗುರುತಿಸಿದ್ದಲ್ಲಿ ತಹಸೀಲ್ದಾರ್ ಅವರೊಂದಿಗೆ ಸ್ಥಳ ಪರಿಶೀಲನೆ ಮಾಡಿಸಿ ಅವರ ಮೂಲಕ ಪ್ರಸ್ತಾವನೆ ಕಳುಹಿಸಿಕೊಟ್ಟಲ್ಲಿ ಜಮೀನು ಕಾಯ್ದಿರಿಸುವುದಾಗಿ ಭರವಸೆ ಇತ್ತರು.
ನಿವೇಶನ ಹಾಗೂ ಹಕ್ಕು ಪತ್ರ ನೀಡುವುದು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿದ್ದು ನಂತರ ಅಲೆಮಾರಿಗಳ ಕೋಶ ಹಾಗೂ ಮತ್ತಿತರ ನಿಗಮಗಳ ಅನುದಾನದಲ್ಲಿ ಮನೆ ಕಟ್ಟಿಸಿಕೊಡುವುದಾಗಿದೆ ಎಂದರು. ನನ್ನ ಅಧೀನದಲ್ಲಿ ಅಲೆಮಾರಿಕೋಶ ಸೇರಿದಂತೆ ನಾಲ್ಕು ನಿಗಮಗಳು ಬರುವುದಿದ್ದು ನಿಗಮದ ಮೂಲಕ ಅರ್ಹ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಲೋನ್, ಸಬ್ಸಿಡಿ ಕೊಡಿಸಲಾಗುವುದು ಎಂದರು. ಮಹಿಳೆಯರಿಗೆ ಕೂಡ ಉದ್ಯೋಗಿನಿ ಯೋಜನೆಯಡಿಯಲ್ಲಿ ಟೈಲರಿಂಗ್, ಬ್ಯೂಟಿಷಿಯನ್ ತರಬೇತಿ ನೀಡಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಇದಕ್ಕೂ ಮುನ್ನ ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹುಳಿಯಾರು ರಾಜಣ್ಣ ಮಾತನಾಡಿ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ, ದಬ್ಬೇಘಟ್ಟ, ಹನುಮಂತಪುರ, ಜಯಚಂದ್ರ ನಗರ , ಹುಳಿಯಾರು ಶಂಕರಪುರ, ಸಿಂಗದಹಳ್ಳಿ, ಕಾತ್ರಿಕೆಹಾಳ್, ಆಶ್ರಿಹಾಳ್ ಸೇರಿದಂತೆ ವಿವಿಧೆಡೆ ಅಲೆಮಾರಿ ಸಮುದಾಯದವರಾದ ಸುಡುಗಾಡು ಸಿದ್ಧರು, ಶಿಳ್ಳೆಕ್ಯಾತರು, ದೊಂಬರು, ಕೊರಮರು , ದರ್ವೇಷಿಗಳು, ಪಿಂಜಾರರು, ಕರಡಿ ಖಲಂದರ್, ಹಕ್ಕಿಪಿಕ್ಕಿಗಳ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಸಂಸದ ಮುದ್ದಹನುಮೇಗೌಡರು ಮಾತನಾಡಿ ಅಲೆಮಾರಿ ಜನಾಂಗದವರಿಗೆ ತಾವು ಕೂಡ ಬೆನ್ನೆಲುಬಾಗಿ ನಿಂತಿದ್ದು ಎಲ್ಲರ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಗೊಳಿಸುವುದಾಗಿ ಭರವಸೆ ಇತ್ತರು.
ಅಲೆಮಾರಿ ಜನಾಂಗದವರ ಇನ್ನುಳಿದ ಬೇಡಿಕೆಗಳ ಬಗ್ಗೆಯೂ ಶೀಘ್ರ ಪರಿಹರಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಯಿತು.
ಈ ವೇಳೆ ತಿಪಟೂರು ಉಪವಿಭಾಗಾಧಿಕಾರಿ ಉಮೇಶ್ ಚಂದ್ರ, ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಸೋಮಪ್ಪ ಕಡಕೋಳ ಸೇರಿದಂತೆ ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಹುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್, ತಿಮ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್, ಗ್ರಾಪಂ ಸದಸ್ಯ ಎಲ್.ಆರ್.ಚಂದ್ರಶೇಖರ್, ವೆಂಕಟೇಶ್, ರಾಘವೇಂದ್ರ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ, ಅಶೋಕ್ ಮೊದಲಾದವರಿದ್ದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹುಳಿಯಾರು ರಾಜಣ್ಣ, ಹನುಮಂತಪುರ ರಾಜಪ್ಪ, ಶಾಂತರಾಜು ಸೇರಿದಂತೆ ಹನುಮಂತಪುರ, ಡಿಂಕನಹಳ್ಳಿ, ಜಯಚಂದ್ರ ನಗರ ಹುಳಿಯಾರಿನ ಶಂಕರಪುರ, ಅಣೆಪಾಳ್ಯ ಮುಂತಾದ ಭಾಗಗಳ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಸಮುದಾಯದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ