ಚಿತ್ರದುರ್ಗ:
ಏಷಿಯನ್ ಗೇಮ್ಸ್ನಲ್ಲಿ ಭಾರತದ ಮಹಿಳೆಯರು ಚಿನ್ನದ ಪದಕಗಳನ್ನು ಗೆದ್ದಿರುವುದು ಸ್ವಲ್ಪ ಸಮಾಧಾನದ ಸಂಗತಿಯಾದರೂ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಒತ್ತಾಯಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ, ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ದಶಮಾನೋತ್ಸವ ಶೈಕ್ಷಣಿಕ ವರ್ಷಾಚರಣೆ ಅಂಗವಾಗಿ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುರವಾರದಿಂದ ಆರಂಭಗೊಂಡಿರುವ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜುಗಳ ಪುರುಷರ ಹಾಗೂ ಮಹಿಳೆಯರ 9 ನೇ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕ್ರೀಡಾಪಟುಗಳು ಭಾಗವಹಿಸುವುದರಿಂದ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು ನೆರವಾಗಲಿದೆ. ಯೂನಿರ್ವಸಿಟಿಯಲ್ಲಿ ಆಡುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ದಸರಾ ಕ್ರೀಡೆಯನ್ನು ಹಬ್ಬದ ರೀತಿಯಲ್ಲಿ ಈಗಲೂ ಹಳ್ಳಿಗಳಲ್ಲಿ ಆಚರಿಸುತ್ತಿದ್ದಾರೆ.
ಈ ಬಾರಿ ನೇರವಾಗಿ ಎಂಟು ತಂಡಗಳು ಬೆಂಗಳೂರಿನ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿರುವುದು ನಿಜಕ್ಕೂ ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಕ್ರೀಡಾ ಖಾತೆಯನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನೋಡುತ್ತಾರೋ ಇಲ್ಲ ಕ್ರೀಡೆಗೆ ಪ್ರೋತ್ಸಾಹ ಕೊಡುತ್ತಾರೋ ಎನ್ನುವುದು ಅನುಮಾನವಾಗಿದೆ. ಯಾವುದೇ ಸರ್ಕಾರಗಳು ಆಡಳಿತದಲ್ಲಿರಲಿ ಕ್ರೀಡೆಗೆ ಹೆಚ್ಚಿನ ಒತ್ತು ಕೊಡಬೇಕು. ತೀರ್ಪುಗಾರರು ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಭಾರತಕ್ಕೆ ಪ್ರತಿಭಾವಂತ ಆಟಗಾರರನ್ನು ಕೊಡುಗೆಯಾಗಿ ನೀಡಬೇಕು ಎಂದು ಸೂಚಿಸಿದರು.
ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಧರಣೇಂದ್ರಯ್ಯ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಒಂದು ದೇಶ, ಶಾಲಾ-ಕಾಲೇಜಿಗೆ ಒಳ್ಳೆಯ ಕೀರ್ತಿ ಬರಬೇಕಾದರೆ ಕ್ರೀಡಾಪಟುಗಳಿಂದ ಮಾತ್ರ ಸಾಧ್ಯ. ಕ್ರೀಡಾಪಟುಗಳಿಗೆ ಪೌಷ್ಟಿಕಾಂಶ ಆಹಾರ ಬೇಕಾಗಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರೀಡೆಗೆ ವಿಶೇಷ ಗಮನ ಕೊಟ್ಟು ಕ್ರೀಡಾಪಟುಗಳಿಗೆ ಬೇಕಾಗಿರುವ ಸವಲತ್ತುಗಳನ್ನು ಒದಗಿಸುವಂತೆ ಮನವಿ ಮಾಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ರಾಜ್ಕುಮಾರ್ ಮಾತನಾಡಿದರು ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದಾನಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕ್ರೀಡಾಕೂಟದ ಕಾರ್ಯದರ್ಶಿ ಹೆಚ್.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/2-4.gif)