ದಾವಣಗೆರೆ:
ಕರ್ನಾಟಕ ರಾಜ್ಯ ಟೈಲರ್ಸ್ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ, ರಾಜ್ಯ ಟೈಲರ್ಸ್ ಮತ್ತು ಸಹಾಯಕರ ಫೆಡರೇಷನ್ ನೇತೃತ್ವದಲ್ಲಿ ಟೈಲರ್ಗಳು ಹಾಗೂ ಸಹಾಯಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಟೈಲರ್ಗಳು ಮತ್ತು ಸಹಾಯಕರು, ಟೈಲರಿಂಗ್ ಕ್ಷೇತ್ರವನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ನಾಗರೀಕ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಟೈಲರ್ಗಳು ಅಸಂಘಟಿತ ವಲಯದಲ್ಲಿದ್ದಾರೆ. ಯಾವುದೇ ಸೌಲಭ್ಯಗಳೂ ಇಲ್ಲದೇ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಬಹುತೇಕ ಮಹಿಳೆಯರು ಇಂಥಹ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಕಾರ್ಮಿಕ ಕಾಯ್ದೆಯೂ ಸಹ ಅನ್ವಯವಾಗುವುದಿಲ್ಲ.
ಸಣ್ಣ ಗಾರ್ಮೆಂಟ್ಸ್ ಘಟಕಗಳಲ್ಲಿ, ಟೈಲರ್ ಅಂಗಡಿಗಳಲ್ಲಿ ಲೈಟರಿಂಗ್ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡ ಸುಮಾರು 20 ಲಕ್ಷಕ್ಕೂ ಅಧಿಕ ಜನರು ರಾಜ್ಯದಲ್ಲಿದ್ದಾರೆ. ಆದರೆ, ಇವರಿಗೆ ಯಾವುದೇ ಸೌಲಭ್ಯಗಳಿಲ್ಲ ಎಂದು ಆರೋಪಿಸಿದರು.
ಟೈಲರ್ ವೃತ್ತಿ ಮಾಡುವವರಲ್ಲಿ ಪ್ರೌಢ, ಪದವಿ, ಉನ್ನತ ಶಿಕ್ಷಣ ಪಡೆದವರೂ ಇದ್ದಾರೆ. ಟೈಲರಿಂಗ್ ಮಾಡಿಕೊಂಡೇ ಸಂಕಷ್ಟದಲ್ಲೂ ಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳು ರಾಜ್ಯಾದ್ಯಂತ ಇವೆ. ಸರ್ಕಾರಿ ಕೆಲಸವನ್ನೇ ಅವಲಂಭಿಸದೇ, ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಟೈಲರಿಂಗ್ ತರಬೇತಿ ಪಡೆದು, ಅದೇ ವೃತ್ತಿಯಲ್ಲಿ ತಮ್ಮದೊಂದು ಪುಟ್ಟ ಬದುಕನ್ನು ಈ ಜನರು ಕಟ್ಟಿಕೊಂಡಿದ್ದಾರೆ. ಸಣ್ಣಪುಟ್ಟ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಟೈಲರ್ ವೃತ್ತಿಯವರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸದ ಕಾರಣಕ್ಕೆ ಕನಿಷ್ಟ ಸೌಲಭ್ಯಗಳೂ ಸಿಗುತ್ತಿಲ್ಲ.
ಟೈಲರ್ಗಳ ಆರೋಗ್ಯ ಸುಧಾರಣೆಗೆ ಆರ್ಥಿಕ ನೆರವು, ಮಕ್ಕಳ ಶಿಕ್ಷಣಕ್ಕೆ ನೆರವು, ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಟೈಲರ್ಸ್ ಕಲ್ಯಾಣ ಮಂಡಳಿ ಸ್ಥಾಪಿಸುವ ಮೂಲಕ ಟೈಲರ್ಗಳಿಗೆ ಮತ್ತು ಸಹಾಯಕರಿಗೆ ನೆರವು ನೀಡಬೇಕೆಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಟ್ಟಡ ಮತ್ತಿತರೆ ನಿರ್ಮಾಣ ಮಾಲೀಕರಿಂದ ಸೆಸ್ ಮೂಲಕ ಹಣ ಸಂಗ್ರಹಿಸುವಂತೆ ಟೈಲರ್ಗಳ ಮಂಡಳಿಗೂ ಟೆಕ್ಸ್ಟೈಲ್ ಮಿಲ್, ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳು, ಬಟ್ಟೆ ಹೊಲಿಗೆಗೆ ಪೂರಕವಾಗಿ ಉತ್ಪನ್ನವಾಗುವ ಸರಕು ಉತ್ಪಾದಕರಿಂದ ಸೆಸ್ ಸಂಗ್ರಹಿಸುವ ಮೂಲಕ ಟೈಲರ್ ಕಲ್ಯಾಣ ಮಂಡಳಿ ಮೂಲಕ ರಾಜ್ಯಾದ್ಯಂತ ಟೈಲರ್ಗಳು, ಮತ್ತವರ ಕುಟುಂಬಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಫೆಡರೇಷನ್ನ ರಾಜ್ಯ ಖಜಾಂಚಿ ಆನಂದರಾಜ್, ಸಿ.ರಮೇಶ, ಯಶೋಧ, ರಮೇಶ, ಬೊಮ್ಮಕ್ಕ, ರಂಗನಾಥ ಆವರಗೆರೆ, ಆವರಗೆರೆ ವಾಸು, ಸರೋಜಾ, ಶಾಂತಕುಮಾರ, ಮಂಜುಳಾ, ರೇಖಾ, ಕನ್ನಮ್ಮ, ಗೌರಮ್ಮ, ಲಕ್ಷ್ಮಮ್ಮ, ನಿರ್ಮಲ, ಕೆ.ಎಂ.ಗೌರಮ್ಮ, ರೇಖಾ, ಗೌರಮ್ಮ, ನಿರ್ಮಲಾ, ವಿ.ಮಂಜುಳಾ, ಆರ್.ವಸಂತ, ಪುಷ್ಪಾ, ವಿಶಾಲ, ಎಸ್.ಆರ್.ಶೋಭಾ, ಪುಷ್ಪಾ, ಎಚ್.ಅಶ್ವಿನಿ, ಎಚ್.ಸುಧಾ, ನಾಗಮ್ಮ, ರಹಮತ್, ನಾಗರಾಜ, ವಿನುತಾ, ನಿರ್ಮಲ, ಸಿದ್ದಿಕ್ ಭಾನು, ಡಿ.ಕೆ.ಮಾಲಾ, ರೇಖಾ, ಗೌರಮ್ಮ, ಮಂಜುಳಾ, ಟಿ.ಕೆ.ಲಕ್ಷ್ಮಣನಾಯ್ಕ, ಅನ್ನಪೂರ್ಣ, ವೀಣಾ, ವಿನೋದಮ್ಮ, ಲಕ್ಷ್ಮಮ್ಮ, ಸಿ.ಎಚ್.ಆಶಾ, ರೇಷ್ಮಾ ಬಾನು ಮತ್ತಿತರರು ಭಾಗವಹಿಸಿದ್ದರು.