ಬೆಂಗಳೂರು:
ಇತ್ತೀಚೆಗಷ್ಟೇ ಬಿಬಿಎಂಪಿಯ ಉಪ ಮೇಯರ್ ಆಗಿ ಆಯ್ಕೆಯಾಗಿದ್ದ ರಮೀಳಾ ಉಮಾಶಂಕರ್ (44 ವರ್ಷ) ಹೃದಯಾಘಾತದಿಂದ ಗುರುವಾರ ತಡರಾತ್ರಿ ನಿಧನ ಹೊಂದಿದ್ದಾರೆ.
ತಡರಾತ್ರಿ 12 ಗಂಟೆಯ ಸುಮಾರಿಗೆ ತೀವ್ರ ಎದೆನೋವು ಕಂಡು ಬಂದಿತ್ತು. ಕೂಡಲೇ ರಮೀಳಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಕಾವೇರಿಪುರಂ ವಾರ್ಡ್ ನಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಕಳೆದ ವಾರ ನಡೆದಿದ್ದ ಬಿಬಿಎಂಪಿ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಉಪಮೇಯರ್ ಆಗಿ ಆಯ್ಕೆಗೊಂಡಿದ್ದರು.
ಪಾಲಿಕೆ ಕಛೇರಿಗಳಿಗೆ ರಜೆ ಘೋಷಣೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಉಪಮಹಾಪೌರರಾದ ಶ್ರೀಮತಿ.ರಮೀಳಾ ಉಮಾಶಂಕರ್ ರವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಪಾಲಿಕೆಯ ವ್ಯಾಪ್ತಿಗೊಳಪಡುವ ಎಲ್ಲಾ ಕಛೇರಿಗಳಿಗೆ (ಅಗತ್ಯ ಸೇವೆಗಳಾದ ಆರೋಗ್ಯ, ಮಾರುಕಟ್ಟೆ ಹೊರತು ಪಡಿಸಿ)ಇಂದು ಮಾನ್ಯ ಆಯುಕ್ತರ ಆದೇಶದ ಮೇರೆಗೆ ರಜೆ ಘೋಷಣೆ ಮಾಡಲಾಗಿದೆ.
ಅಂತ್ಯಕ್ರಿಯೆ:
ರಮೀಳಾ ಅವರ ಅಂತ್ಯಕ್ರಿಯೆ ಮಾಗಡಿ ಮುಖ್ಯರಸ್ತೆಯ ಕಡಬಗೆರೆ ಕ್ರಾಸ್ ಬಳಿಯ ಕಿತ್ತನಹಳ್ಳಿಯಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ