ಉಪವಾಸ ಸತ್ಯಾಗ್ರಹ

ಬೆಂಗಳೂರು

     ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ದೇಶದ ಏಕತೆ ಹಾಗೂ ಗಾಂಧೀ ತತ್ವಗಳ ಉಳಿಸಲು ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ಕ್ಷೇತ್ರದ ಕಲಾವಿದರು, ಯುವಕರು, ಜನಪದ ಹಾಡುಗಳ ಮೂಲಕ ಗಮನ ಸೆಳೆದರು.

     ಗ್ರಾಮಸೇವಾ ಸಂಘದ ನೇತತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು, ಕಲಾವಿದರು, ಗುಡಿಕೈಗಾರಿಕೆ ಕಾರ್ಮಿಕರು, ಖಾದಿ ಮಾರಾಟಗಾರರು ಸೇರಿದಂತೆ ಪ್ರಮುಖರು ಜನಪದ ಹಾಡುಗಳ ಮೂಲಕ ದೇಶದ ಸಮಸ್ಯೆಗಳು, ನಾಶವಾಗುತ್ತಿರುವ ಪರಂಪರೆಯನ್ನು ಬಿಂಬಿಸಿದರು..

     ಉಪವಾಸ ಸತ್ಯಾಗ್ರಹದಲ್ಲಿ ಜನಪದ ಗೀತೆಗಳು, ಬಸವಣ್ಣನ ವಚನ, ಗಾಂಧಿಯ ಆಶಯ, ಖಾದಿ ಬಟ್ಟೆಗಳ ಮೂಲಕ ಫ್ಯಾಷನ್ ಷೋ, ಗಾಂಧೀಜಿ ಅವರ ಆಶಯಗಳನ್ನು ಧ್ವನಿಸುವ ಹಾಡುಗಳು, ನಾಟಕಗಳು ನಡೆದವು. ಜೊತೆಗೆ, ಸ್ಥಳದಲ್ಲಿಯೇ ಖಾದಿ ಬಟ್ಟ್ಟೆಗಳನ್ನು ತಯಾರಿಸುವ ಮೂಲಕ ಖಾದಿ ಉತ್ಪನ್ನಗಳಿಗೆ ತೆರಿಗೆ ಹಾಕಬೇಡಿ ಎಂದು ಮನವಿಯಿಟ್ಟರು.

     ಹೆಣ್ಣುಮಕ್ಕಳ ಮೇಲೆ ಹಿಂಸೆ ಹೆಚ್ಚುತ್ತಿದೆ. ಹಿಂಸೆಯನ್ನು ತಡೆಯಲು ಪ್ರತಿಹಿಂಸೆ ನಡೆಸಬೇಕಾಗಿಲ್ಲ. ಎದುರಾಳಿಯ ಒಳಗಿರುವ ಮಾನವೀಯ ಗುಣ, ತಾಯ್ತನದ ಗುಣವನ್ನು ಎಚ್ಚರಿಸುವುದೇ ನಮಗಿರುವ ದಾರಿ. ಗಾಂಧೀಜಿ ಅವರ ಆಶಯವೂ ಇದೇ ಆಗಿತ್ತು ಎಂದು ಲೇಖಕಿ ಸರಸ್ವತಿ ಅಭಿಪ್ರಾಯಪಟ್ಟರು.

     ದೇಶದಲ್ಲಿ ಏನಾಗುತ್ತಿದೆ. ನಮ್ಮ ಸುತ್ತಮುತ್ತ ಸಂಭವಿಸುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯೂ ಯುವಜನರು ಆಸಕ್ತರಾಗಿದ್ದಾರೆ. ಅದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಇನ್ನೂ,ದಿನ ನಿತ್ಯ ಜೀವನದಲ್ಲಿ ನಾನು ದೇಸಿ ಬಟ್ಟೆಗಳನ್ನೇ ಬಳಸುತ್ತೇನೆ. ಖಾದಿ ಮತ್ತು ಹತ್ತಿಯ ಉಡುಪುಗಳು ನಮ್ಮ ಸ್ವದೇಶಿ ವಾತಾವರಣಕ್ಕೆ ಪೂರಕವಾಗಿವೆ. ನಾನು ವಿದೇಶಿ ಬ್ರಾಂಡ್‍ನ ಉಡುಪುಗಳನ್ನು ಬಳಸುವುದಿಲ್ಲ. ನನ್ನ ಹಣ ನನ್ನ ದೇಶದ ಕಂಪನಿಗೇ ಸೇರಬೇಕು ಎಂದು ಗಾಯಕ ವಾಸು ದೀಕ್ಷಿತ್ ನುಡಿದರು.

    ವಸ್ತ್ರವಿನ್ಯಾಸಕ ಪ್ರಸಾದ್ ಬಿದಪ್ಪ ಅವರಿಂದ ಫ್ಯಾಷನ್ ಐಕಾನ್ ಗಾಂಧಿ ಪ್ರಾತ್ಯಕ್ಷಿಕೆಯಲ್ಲಿ ನೂರಾರು ಯುವಕ-ಯುವತಿಯರು ಪಾಲ್ಗೊಂಡು, ಖಾದಿ ಬಟ್ಟೆಗಳನ್ನು ತೊಟ್ಟು, ಫ್ಯಾಷನ್ ಷೋ ನಡೆಸಿದರು. ಅದೇರೀತಿ, ರಂಗಾಯಣ ಮೈಸೂರು ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅವರಿಂದ ಕಮಲಾದೇವಿ ಚಟ್ಟೋಪಾಧ್ಯಾಯ ನಾಟಕ, ಲೇಖಕಿ ಸರಸ್ವತಿ ಅವರಿಂದ ಎಲ್ಲಿ ಹೋದವೋ, ಎದೆಯ ಗೂಡಿನ ಹಕ್ಕಿಗಳು ಸ್ತ್ರೀಪರ ಏಕವ್ಯಕ್ತಿ ಪ್ರರ್ದಶನ ಸೇರಿದಂತೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link