ಜಗತ್ತಿನಲ್ಲೇ ಮ್ಯಾರಥಾನ್ ಓಟಕ್ಕೆ ಮಹತ್ವ ಇದೆ: ಹುಲಿನಾಯ್ಕರ್

ತುಮಕೂರು

      ಇಡೀ ಜಗತ್ತಿನಲ್ಲೇ ಮ್ಯಾರಥಾನ್ ಓಟಕ್ಕೆ ಅತ್ಯಂತ ಮಹತ್ವವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಇಂದಿಲ್ಲಿ ಹೇಳಿದರು.

       ನಗರದ ಎಸ್‍ಐಟಿ ಮುಖ್ಯ ರಸ್ತೆಯಲ್ಲಿರುವ ಸಿದ್ದೇಶ್ವರ ಕನ್ವೆನ್ಷನ್ ಹಾಲ್ ಮುಂಭಾಗದಿಂದ ಶ್ರೀ ವಿನಾಯಕ ಯೂತ್ ಅಸೋಸಿಯೇಷನ್ ವತಿ ಯಿಂದ ಹಸಿರು ತುಮಕೂರು, ನೀರು ಮತ್ತು ನದಿಗಳನ್ನು ಉಳಿಸುವ ಸಲುವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

       ವಯಸ್ಸಿನ ಮಿತಿಯಿಲ್ಲದೆ ಮಹಿಳೆಯರು, ಪುರುಷರು, ಮಕ್ಕಳು ಎಲ್ಲರೂ ಭಾಗವಹಿಸಬಹುದಾದ ಮ್ಯಾರಥಾನ್ ಓಟ ಮನುಷ್ಯನ ಆರೋಗ್ಯಕ್ಕೂ ಉತ್ತಮವಾದ ಸ್ಪರ್ಧೆ. ಒಂದು ಉತ್ತಮ ಉದ್ದೇಶದೊಂದಿಗೆ ನಡೆಯುತ್ತಿರುವ ಈ ಮ್ಯಾರಥಾನ್ ಓಟದ ಧ್ಯೇಯೋದ್ಧೇಶ ಈಡೇರಲಿ ಎಂದು ಆಶಿಸಿದರು.

      ರಾಜಧಾನಿ ಬೆಂಗಳೂರು, ತುಮಕೂರು ಸೇರಿದಂತೆ ಹಲವೆಡೆಗಳಲ್ಲಿ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕಡೆ ಹೆಚ್ಚು ಹೆಚ್ಚು ಹಮ್ಮಿಕೊಳ್ಳುವಂತಾಗಲಿ ಎಂದು ಆಶಿಸಿದರು.

      ಚಂದನ್ ಮಾತನಾಡಿ, ಹಸಿರು ತುಮಕೂರು, ನೀರು ಮತ್ತು ನದಿಗಳ ಉಳಿವಿಗಾಗಿ ಶ್ರೀ ವಿನಾಯಕ ಯೂತ್ ಅಸೋಸಿಯೇಷನ್ ವತಿಯಿಂದ ಈ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

      ಬೆಳಿಗ್ಗೆ 6 ಗಂಟೆಗೆ ಎಸ್‍ಐಟಿ ಮುಖ್ಯರಸ್ತೆಯಲ್ಲಿರುವ ಸಿದ್ದೇಶ್ವರ ಕನ್ವೆನ್ಷನ್ ಹಾಲ್‍ನಿಂದ ಆರಂಭವಾದ ಮ್ಯಾರಥಾನ್ ಓಟ ಗಂಗೋತ್ರಿ ರಸ್ತೆ, ಬಿ.ಹೆಚ್. ರಸ್ತೆಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸರ್ಕಲ್, ಭದ್ರಮ್ಮ ಛತ್ರದ ಮೂಲಕ ಹಾದು ವಾಸನ್ ಐಕೇರ್, ಎಸ್.ಎಸ್.ಪುರ ಮುಖ್ಯ ರಸ್ತೆಯಿಂದ ಇಂದಿರಾ ಗಾಂಧಿ ವೃತ್ತದ ಮುಖೇನ ಸಿದ್ದೇಶ್ವರ ಕನ್ವೆನ್ಷನ್ ಹಾಲ್ ತಲುಪಿ ಮುಕ್ತಾಯಗೊಂಡಿತು.  

      ಈ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ 16 ವರ್ಷದೊಳಗಿನ ಬಾಲಕರಲ್ಲಿ ಸಿದ್ದಗಂಗಾ ಮಠದ ಆಕಾಶ್ ಬಿ., ಸರ್ವೋದಯ ಪ್ರೌಢಶಾಲೆಯ ಧನುಷ್ ಪಿ., ಚೇತನ ವಿದ್ಯಾಮಂದಿರದ ಶಶಾಂಕ್ .ಎಂ, ಬಾಲಕಿಯರಲ್ಲಿ ಸೋಮೇಶ್ವರ ಶಾಲೆಯ ಬಿಲ್ಪಶ್ರೀ, ಯಂಗ್ ಛಾಲೆಂಜರ್ಸ್ ಸಂಸ್ಥೆಯ ಲಿಖಿತ ಹಾಗೂ ಪ್ರಕೃತಿ ಬಹುಮಾನ ಪಡೆದಿದ್ದಾರೆ.

   ಮಹಿಳೆಯರ ಪೈಕಿ ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಬಿ. ನೇತ್ರಾವತಿ, ಅಶೋಕನಗರದ ಪಿ. ಮೇಘನಾ, ಶಾರದಾಂಬ ಪ.ಪೂ. ಕಾಲೇಜಿನ ನಾಗಮಣಿ, ಪುರುಷರಲ್ಲಿ ಕೊರಟಗೆರೆಯ ಸಂದೀಪ್ ಟಿ.ಎಸ್., ಪೊಲೀಸ್ ಇಲಾಖೆಯ ಗುರುಪ್ರಸಾದ್, ಕುಣಿಗಲ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೋರೇಗೌಡ ಬಹುಮಾನ ಪಡೆದಿದ್ದಾರೆ.

     ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಸುಮಾರು 500 ಮಂದಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಅಸೋಸಿಯೇಷನ್ ವತಿಯಿಂದ ಟೀ ಶರ್ಟ್‍ಗಳನ್ನು ವಿತರಿಸಲಾಯಿತು. ಜತೆ ಪ್ರಮಾಣ ಪತ್ರವನ್ನು ಸಹ ನೀಡಲಾಯಿತು.

      ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಹೆಚ್. ಮಲ್ಲಿಕಾರ್ಜುನಯ್ಯ, ಲೋಹಿತ್, ಸಿದ್ದಲಿಂಗಮೂರ್ತಿ, ಸಿದ್ದಲಿಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link