ಲಿಂಗಾಯತರು ಇನ್ನೂ ಕೋಮಾದಲ್ಲಿಯೇ ಇದ್ದಾರೆ

ತುಮಕೂರು

    ವೀರಶೈವ ಲಿಂಗಾಯತರಿಗೆ 12ನೇ ಶತಮಾನವೇ ಬಂಡವಾಳವಾಗಿದೆ. ಅವರು 12ನೇ ಶತಮಾನವನ್ನು ಬಿಡಬೇಕು. ಬಸವಣ್ಣನ ಕಾಲದ ಕೋಮಾದಲ್ಲಿಯೇ ಇಂದಿನ ಜನರಿದ್ದಾರೆ. ಅದು ಬದಲಾಗಬೇಕಿದೆ. ವರ್ತಮಾನ ಕಾಲದಲ್ಲಿನ ವೀರಶೈವ ಲಿಂಗಾಯತರನ್ನು ಗುರುತಿಸಬೇಕು ಎಂದು ಹಿರೇಮಠದ ಅಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನುಡಿದರು.

    ನಗರದ ಸಿದ್ದಗಂಗಾ ಮಹಿಳಾ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಮನ್ವಯ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಚನ ವೈಭವ ಹಾಗೂ ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ವೀರಶೈವ ಲಿಂಗಾಯತರು ತಮ್ಮಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ಮಾಡಬೇಕಿದೆ. ಕೇವಲ 12ನೇ ಶತಮಾನದ ವಚನಕಾರರನ್ನು ನೆನೆಯುತ್ತ ಅದರಲ್ಲೇ ಕಾಲ ಕಳೆದರೆ ಇಂದಿನ ದಿನಗಳಲ್ಲಿನ ಪ್ರತಿಭೆಗಳನ್ನು ಗುರುತಿಸುವುದು ಯಾವಾಗ? ಅಂತಹವರಿಗೆ ಪ್ರೋತ್ಸಾಹ ಸಿಗುವುದು ಯಾವಾಗ? ನಾವು ನಮ್ಮ ಸಮಾಜದ ಪ್ರತಿಭೆಗಳನ್ನು ಅವರು ಮಾಡಿದ ಸಾಧನೆಯನ್ನು ಗುರುತಿಸಬೇಕು. ವೀರಶೈವ ಲಿಂಗಾಯತರ ಶಕ್ತಿಯನ್ನು ಪ್ರದರ್ಶಿಸಬೇಕು ಎಂದರು.

      ವೀರಶೈವ ಲಿಂಗಾಯತರನ್ನು ವೈಭವೀಕರಿಸಿ ಅವರನ್ನು ಬೆಳೆಸುವ ಕೆಲಸ ಮಾಡಬೇಕು. ಯುವಜನರನ್ನು ಪ್ರೋತ್ಸಾಹಿಸುವ ಮೂಲಕ ಸಾಧನೆಗಳು ಮಾಡುವಂತೆ ಮಾಡಬೇಕು. ಇಂದು ವೀರಶೈವ ಲಿಂಗಾಯತರು ಮೀಸಲಾತಿಯಲ್ಲಿ ಅತ್ತ ಮೇಲೆ ಹೋಗದೆ ಇತ್ತ ಕೆಳಕ್ಕೆ ಬಾರದೆ ಮಧ್ಯ ತ್ರಿಶಂಕು ಸ್ಥಾನದಲ್ಲಿ ಪರದಾಡುತ್ತಿದ್ದಾರೆ. ನಮ್ಮ ಸಮುದಾಯದವರು ರಾಜಕೀಯವಾಗಿ ಬೆಳೆದವರು ಸಮಾಜದ ಬಗ್ಗೆ ಕೊಂಚ ಕಾಳಜಿ ಬೆಳೆಸಿಕೊಳ್ಳಿ ಎಂದರಲ್ಲದೆ, ಸಮನ್ವಯ ವೇದಿಕೆ ಬಗ್ಗೆ ಮಾತನಾಡಿ ದಕ್ಷಿಣ ಭಾಗದಲ್ಲಿ ಎಲ್ಲರಲ್ಲೂ ಸಮನ್ವಯತೆ ಇದೆ. ಉತ್ತರ ಕರ್ನಾಟಕದಲ್ಲಿಯೇ ಇನ್ನೂ ಸಮನ್ವಯದ ಕೊರತೆ ಕಂಡು ಬರುತ್ತಿದೆ. ಆ ಭಾಗದಲ್ಲಿ ಸಮನ್ವಯತೆ ಮೂಡಿ ಬರುವಂತಹ ಕಾರ್ಯಕ್ರಮಗಳನ್ನು ಮಾಡಿ ಎಂದು ಸಮನ್ವಯ ವೇದಿಕೆ ಅಧ್ಯಕ್ಷರಿಗೆ ಮನವಿ ಮಾಡಿದರು.

      ವೀರಶೈವ ಲಿಂಗಾಯತ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಶಿವಕುಮಾರ್ ಆರಾಧ್ಯ ಮಾತನಾಡಿ, ಸಮನ್ವಯ ವೇದಿಕೆಯು ಕಳೆದ ಫೆಬ್ರವರಿಯಲ್ಲಿ ಸ್ಥಾಪನೆಯಾಗಿದ್ದು, ಈಗಾಗಲೇ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ನಾವು ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಅವರ ನಂತರವೇ ರಾಜಕೀಯ ವ್ಯಕ್ತಿಗಳಗೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ 50 ತಾಲ್ಲೂಕುಗಳಲ್ಲಿ ವೇದಿಕೆ ಪ್ರಾರಂಭ ಮಾಡಲಾಗಿದ್ದು, ಇತ್ತೀಚೆಗಷ್ಟೇ ಜಮಖಂಡಿಯಲ್ಲಿ 600 ಮಂದಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ಬಾಗಿನ ಸಮರ್ಪಣೆ ಕಾರ್ಯ ಮಾಡಲಾಯಿತು. ಚಪ್ಪಾಳೆ ತಟ್ಟುವ ಹತ್ತು ಬೆರಳುಗಳ ಬದಲಾಗಿ ಕಣ್ಣೀರು ಒರೆಸುವ ಒಂದು ಬೆರಳಾಗಿ ಸೇವೆ ಸಲ್ಲಿಸಬೇಕು ಎಂಬ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಗೆ ನೂತನ ಸದಸ್ಯರಾಗಿ ಆಯ್ಕೆಯಾದ 4ನೇ ವಾರ್ಡಿನ ದೀಪಶ್ರೀ, 5ನೇ ವಾರ್ಡಿನ ಮಹೇಶ್, 25ನೇ ವಾರ್ಡಿನ ಮಂಜುಳಾ ಆದರ್ಶ್, 35ನೇ ವಾರ್ಡಿನ ನಿರ್ಮಲ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆ ಮೇಲೆ ವಿಶ್ವಬಂಧು ಪ್ರತಿಷ್ಠಾನದ ಧರ್ಮದರ್ಶಿ ಈ.ಲೋಕೇಶ್ವರಪ್ಪ, ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಯೋಗೀಶ್ವರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ,ಕದಳಿ ಮಹಿಳಾ ವೇದಿಕೆಯ ಲೋಕೇಶ್ವರಿ ಪ್ರಭು, ವೀರಶೈವ ಸಮಾಜದ ಯುವ ವೇದಿಕೆ ಅಧ್ಯಕ್ಷ ಚಂದ್ರಶೇಖರ್, ಟಿ.ಎಂ.ಅಖಿಲೇಶ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link