ಮಾದಿಗ ಜನಾಂಗದಲ್ಲಿ ಒಡಕು ಸೃಷ್ಠಿಗೆ ಹುನ್ನಾರ

ಚಿತ್ರದುರ್ಗ:

       ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪಿಸಿ ಮಾದಿಗರ ವಿರುದ್ದ ಮಾದಿಗರನ್ನೇ ಎತ್ತಿಕಟ್ಟುವ ಕುತಂತ್ರ ಮಾಡಲು ಹೊರಟಿರುವ ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಹೆಚ್.ಆಂಜನೇಯ ವಿರುದ್ದ ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ಜಿಲ್ಲಾ ಶಾಖೆ ಕಾರ್ಯಕರ್ತರು, ಕೂಡಲೇ ಮಾದಿಗ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

      ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆಯಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಮಾದಿಗರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸಿದಾಗ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಆಂಜನೇಯ ಹೋರಾಟಗಾರರನ್ನೆ ಜೈಲಿಗೆ ಕಳಿಸಿ ಮಾದಿಗರ ಮೇಲೆ ದೌರ್ಜನ್ಯ ನಡೆಸಿದ್ದನ್ನು ಅತ್ಯುಗ್ರವಾಗಿ ಖಂಡಿಸಿದರು. 

       ಹಲವಾರು ವರ್ಷಗಳಿಂದಲೂ ರಾಜ್ಯಾದ್ಯಂತ ಮಾದಿಗ ಮಹಾಸಭಾದಿಂದ ಅನೇಕ ಸಭೆಗಳನ್ನು ನಡೆಸಲಾಗಿದೆ. ಭೋವಿ, ಲಂಬಾಣಿ, ವಾಲ್ಮೀಕಿ ಅಭಿವೃದ್ದಿ ನಿಗಮ ಸ್ಥಾಪಿಸಿರುವಂತೆ ಮಾದಿಗರ ಅಭಿವೃದ್ದಿಗಾಗಿ ಸರ್ಕಾರ ಮಾದಿಗ ಅಭಿವೃದ್ದಿ ನಿಗಮ ಸ್ಥಾಪಿಸಬೇಕು. ಯಾವುದೇ ಕಾರಣಕ್ಕೂ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪಿಸಬಾರದು. ಒಂದು ವೇಳೆ ಸ್ಥಾಪಿಸಿ ಮಾದಿಗ ಜನಾಂಗವನ್ನೇ ಇಬ್ಬಾಗ ಮಾಡಿದರೆ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

        ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಅನೇಕ ವರ್ಷಗಳಿಂದಲೂ ನಾವುಗಳು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮಾಜಿ ಸಚಿವ ಹೆಚ್.ಆಂಜನೇಯರವರಿಗೆ ಆಯೋಗದ ವರದಿ ಜಾರಿಯಾಗುವುದು ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

        ಶೋಷಿತ ವರ್ಗದ ರಾಜ್ಯಾಧ್ಯಕ್ಷ ಮಾದಿಗ ಮುಖಂಡ ಬಿ.ರಾಜಪ್ಪ ಮಾತನಾಡುತ್ತ ಹೆಚ್.ಆಂಜನೇಯ ಸಮಾಜ ಕಲ್ಯಾಣ ಮಂತ್ರಿಯಾದಾಗಿನಿಂದಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಾದಿಗ ಜನಾಂಗವನ್ನು ಹೊಡೆದಾಳುವ ನೀತಿ ಅನುಸರಿಸಿಕೊಂಡು ಬಂದಿದ್ದನ್ನು ಬಿಟ್ಟರೆ ಮಾದಿಗ ಸಮಾಜಕ್ಕೆ ಅವರಿಂದ ಯಾವ ಕೊಡುಗೆಯೂ ಇಲ್ಲ.

       ಬಿಜೆಪಿ.ಗೆ ಮತ ಹಾಕಿದ್ದೀರಿ ನಿಮ್ಮ ಜನಾಂಗಕ್ಕೆ ಏಕೆ ಮಂತ್ರಿ ಸ್ಥಾನ ಕೊಡಬೇಕೆಂದು ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ದರ್ಪದ ಮಾತುಗಳನ್ನಾಡಿದ್ದಾರೆ. ಮೀಸಲಾತಿಯಿಂದ ಗೆದ್ದು ಸಚಿವರಾದ ಹೆಚ್.ಆಂಜನೇಯ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲು ಹೊರಟಿರುವುದು ಅವರ ಸ್ವಾರ್ಥಕ್ಕಾಗಿಯೇ ವಿನಃ ಮಾದಿಗರ ಅನುಕೂಲಕ್ಕಾಗಿ ಅಲ್ಲ ಎಂಬುದನ್ನು ಜಿಲ್ಲೆಯ ಸಮಸ್ತ ಮಾದಿಗರು ಅರ್ಥ ಮಾಡಿಕೊಂಡು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

        ಹತ್ತು ಹನ್ನೆರಡು ವರ್ಷಗಳಿಂದಲೂ ಸದಾಶಿವ ಆಯೋಗದ ವರದಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಹೆಚ್.ಆಂಜನೇಯರವರಿಗೆ ಆಯೋಗ ಜಾರಿಯಾಗುವುದು ಬೇಕಾಗಿಲ್ಲ. ಅದಕ್ಕೆ ಬದಲಾಗಿ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಖಾರವಾಗಿ ಪ್ರಶ್ನಿಸಿದರು.

        ಮೀಸಲಾತಿ ಕೊಡಿ ಎಂದು ಕೇಳುವ ಮಾದಿಗರನ್ನು ಕಾಲಿಡಿದು ಎಳೆಯುವ ಕುತಂತ್ರವನ್ನು ಹೆಚ್.ಆಂಜನೇಯ ಈಗಲಾದರೂ ನಿಲ್ಲಿಸಿ ಮಾದಿಗರ ಅಭಿವೃದ್ದಿಗೆ ಕೈಜೋಡಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

       ಮಾದಿಗ ಸಮಾಜದ ಮುಖಂಡ ಟಿ.ದೇವರಾಜ್ ಮಾತನಾಡಿ ಹೆಚ್.ಆಂಜನೇಯ ಮುಂಬರುವ ಯಾವುದೇ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲಿಯೇ ನಿಂತರು ಮಾದಿಗರೆಲ್ಲಾ ಸೇರಿಕೊಂಡು ಸೊಲಿಸುತ್ತೇವೆ. ಮುನಿಯಪ್ಪ, ಸಂಸದ ಚಂದ್ರಪ್ಪ ಇವರುಗಳನ್ನೆಲ್ಲಾ ಜೊತೆಯಲ್ಲಿ ಸೇರಿಸಿಕೊಂಡು ಮಾತೆತ್ತಿದರೆ ದೆಹಲಿಗೆ ಹೋಗಿ ರಾಹುಲ್‍ಗಾಂಧಿ ಎದುರು ಮಂಡಿಯೂರಿ ಮಾದಿಗರಿಗೆ ಟಿಕೇಟ್ ತಪ್ಪಿಸುವ ಕೆಲಸ ಮಾಡುತ್ತಿರುವುದು ಅವರಿಗೆ ಶೋಭೆಯಲ್ಲ. 

       ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲು ಹೊರಟಿರುವುದರ ಹಿಂದೆ ತಂತ್ರಗಾರಿಕೆ ಅಡಗಿದೆ ಎನ್ನುವುದರ ವಿರುದ್ದ ಮಾದಿಗರು ಜಾಗೃತರಾಗಬೇಕು ಎಂದು ಮನವಿ ಮಾಡಿದರು.

       ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಪಾಂಡುರಂಗಸ್ವಾಮಿ, ಮಾದಿಗ ಸಮಾಜದ ಹಿರಿಯ ಮುಖಂಡ ಎಂ.ಶಿವಮೂರ್ತಿ, ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ಬಿ.ಓ.ಗಂಗಾಧರಪ್ಪ, ನ್ಯಾಯವಾದಿ ಎಸ್.ಕೆ.ಸುರೇಶ್, ಕೆ.ರುದ್ರಮುನಿ, ಜಿಲ್ಲಾ ಅಂಗವಿಕಲ ಸಂಘದ ಅಧ್ಯಕ್ಷ ಎನ್.ಟಿ.ವಾಗೀಶ್‍ಕುಮಾರ್, ಶಿವಕುಮಾರ್, ಮಾದಿಗ ಯುವ ಸೇನೆಯ ಚಂದ್ರಪ್ಪ ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link