ಹರಪನಹಳ್ಳಿ
ತಾಲೂಕಿನ ಅರಸಿಕೇರೆಯಿಂದ ಕಂಚಿಕೇರಿಯವರೆಗೂ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತರು ಬುಧುವಾರ ತಾಲೂಕು ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ, ತಹಸೀಲ್ದಾರ ಡಾ.ಮಧುರವರಿಗೆ ಮನವಿ ಸಲ್ಲಿಸಿದರು.
ಹರಪನಹಳ್ಳಿ-ಜಗಳೂರು ವಿಧಾನಸಭಾ ಕ್ಷೇತ್ರದ ಅರಸಿಕೇರಿ ಹೋಬಳಿ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 30ವರ್ಷಗಳ ಹಿಂದೆ ರಸ್ತೆ ನಿರ್ಮಾಣವಾಗಿದ್ದು ಈ ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿವೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅನೇಕ ವಯೋವೃದ್ದರು, ಮಹಿಳೆಯರು ಗರ್ಭೀಣಿ ಬಾಣಂತಿಯರು, ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಗಳಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ.
ಅಲ್ಲದೇ ಅಂಬುಲೇನ್ಸ್, ದ್ವಿಚಕ್ರವಾಹನಗಳು ರಸ್ತೆ ಸರಿ ಇಲ್ಲದ್ದರಿಂದ ಅಪಘಾತಗಳು ಹೆಚ್ಚುತ್ತಿವೆ. ಆದ್ದರಿಂದ ಜನರ ಜೀವಗಳ ಜತೆಗೆ ಅಧಿಕಾರಿಗಳು ಚಲ್ಲಾಟವಾಡುವ ಬದಲು ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಪಿಐ ಪಕ್ಷದಿಂದ ಕಾಲ್ನಡಿಗೆ ಜಾಥದ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ರಸ್ತೆ ಅಭಿವೃದ್ದಿ ಪಡಿಸುವಂತೆ ಮನವಿ ಮಾಡಿದರೂ ಕೂಡ ನಿರ್ಲಕ್ಯವಹಿಸಿರುವುದು ಖಂಡನೀಯವಾಗಿದೆ ಎಂದರು.
ತಹಶೀಲ್ದಾರ ಡಾ.ಮಧು ಹಾಗೂ ಲೋಕಪಯೋಗಿ ಇಲಾಖೆಯ ಎಇಇ ಲಿಂಗಪ್ಪ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ರಸ್ತೆಗಳ ಗುಂಡಿಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಅನುಮೋದನೆ ಬಂದಕೂಡಲೇ ಸರಿಪಡಿಸುವುದಾಗಿ ತಿಳಿಸಿದ ಅವರು ತಾತ್ಕಲಿಕವಾಗಿ ಮಣ್ಣಿನಿಂದ ಗುಂಡಿಮುಚ್ಚಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಹಕಾರ್ಯದರ್ಶಿ ಎಚ್.ಎಂ.ಸಂತೋಷ್, ಮಾದಿಹಳ್ಳಿ ಮಂಜು, ಕಂಚಿಕೇರಿ ಸುರೇಶ್, ಕಾಳಿಂಗಪ್ಪ, ಟಿ.ಕೆಂಚಪ್ಪ, ಎನ್.ನಾಗರಾಜ, ಎಂ.ಬಸವರಾಜ, ಇಮಾಂಸಾಬ್, ಎಂ.ಮಹಾಂತೇಶ್ ಸೇರಿದಂತೆ ಮತ್ತಿತರರು ಇದ್ದರು.