ಉದ್ಯೋಗ ಮೇಳಗಳು ಯುವ ಜನಕ್ಕೆ ಉದ್ಯೋಗವನ್ನು ನೀಡುವ ಶಕ್ತಿ ಕೇಂದ್ರಗಳಾಗಲಿ

ಚಳ್ಳಕೆರೆ

     ಗ್ರಾಮೀಣ ಭಾಗದಲ್ಲಿರುವ ಯುವ ಸಮೂಹಕ್ಕೆ ಉದ್ಯೋಗ ಪಡೆಯುವ ಚಿಂತೆ ಹೆಚ್ಚಾಗಿದೆ. ಕಷ್ಟಪಟ್ಟು ಶಿಕ್ಷಣ ಪೂರೈಸಿದ ನೂರಾರು ಯುವಕರು ಪ್ರತಿನಿತ್ಯ ಕೆಲಸವಿಲ್ಲದೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಬರಗಾಲ ಪೀಡಿತ ಪ್ರದೇಶದವಾದ ಈ ತಾಲ್ಲೂಕಿನ ಯುವಕರಿಗಾದರೂ ರಾಜ್ಯ ಸರ್ಕಾರ ವಿಶೇಷ ಮೀಸಲಾತಿ ಯೋಜನೆಯಡಿ ಉದ್ಯೋಗದ ಅವಕಾಶವನ್ನು ನೀಡುವಂತೆ ತಾಲ್ಲೂಕು ಪಂಚಾಯಿತಿ ಸದಸ್ಯೆ ತಿಪ್ಪಕ್ಕ ಸರ್ಕಾರವನ್ನು ಒತ್ತಾಯಿಸಿದರು.

      ಅವರು, ಭಾನುವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ಘಟಪರ್ತಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮತ್ತು ಬೆಂಗಳೂರಿನ ಗುರುಕುಲ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಗ್ರಾಮೀಣ ಭಾಗದ ರೈತ ಸಮುದಾಯ ಸಂಕಷ್ಟದಲ್ಲಿದ್ದು, ರೈತ ಕುಟುಂಬಗಳ ವಿದ್ಯಾವಂತರಿಗಾದರೂ ಉದ್ಯೋಗ ಭಾಗ್ಯ ಲಭಿಸಿದಲ್ಲಿ ರೈತ ಆತ್ಮಹತ್ಯೆಯಿಂದ ದೂರ ಉಳಿದು ತನ್ನ ಬದುಕನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

      ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪೋಸ್ಟ್ ಮಾಸ್ಟರ್ ಜಿ.ಆರ್.ಕೋಟಿಪ್ರಕಾಶ್ ಮಾತನಾಡಿ, ಉದ್ಯೋಗ ಪಡೆಯುವ ಕನಸು ನನಸಾಗಬೇಕಾದಲ್ಲಿ ಇಂತಹ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಯುವಕರು ಈ ಸಮಾಜದ ಬೆನ್ನೆಲುಬು ಎಂದು ಹೇಳಲಾಗುತ್ತಿದೆಯಾದರೂ ಅವರಿಗೆ ಉದ್ಯೋಗವನ್ನು ನೀಡಿದಾಗ ಮಾತ್ರ ಅವರ ಬದುಕು ಸಹ ಸಮಾಜ ಮುಖಿಯಾಗುತ್ತದೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಯುವ ಸಮೂಹಕ್ಕೆ ಉದ್ಯೋಗವೇ ಉತ್ತಮ ಮದ್ದು ಎಂದರು.

       ಗುರುಕುಲ ಸಂಸ್ಥೆಯ ಮುಖ್ಯಸ್ಥ ಯಾಸೀನ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಮಾತ್ರ ಉದ್ಯೋಗವನ್ನು ಪಡೆಯಲು ಸಾಧ್ಯವೆಂಬ ಭಾವನೆ ಗ್ರಾಮೀಣ ಜನರಲ್ಲಿ ಇರುತ್ತದೆ. ಆದರೆ, ಗ್ರಾಮೀಣ ಭಾಗದಲ್ಲೇ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಉದ್ಯೋಗ ಪಡೆಯುವ ಅವರ ಬಯಕೆಯನ್ನು ಈಡೇರಿಸಲು ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಲ್ಲೇ ನಡೆಸಲಾಗುತ್ತದೆ ಎಂದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಗ್ರಾಮಗಳಲ್ಲೇ ಸುಮಾರು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಇದ್ದಾರೆ. ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲವಾದರೂ ಉತ್ತಮ ಆರ್ಹತೆ ಪಡೆದ ವ್ಯಕ್ತಿಗಳನ್ನಾದರೂ ಪತ್ತೆ ಹಚ್ಚುವಲ್ಲಿ ಈ ಕಾರ್ಯಕ್ರಮ ಹೆಚ್ಚು ಸಹಕಾರಿ ಎಂದರು.

        ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಿಕ್ಕಣ್ಣ, ಶಿಕ್ಷಕ ರಾಜಣ್ಣ, ಮಾಜಿ ಅಧ್ಯಕ್ಷ ಯಲ್ಲಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಓಬಣ್ಣ, ಸಣ್ಣ ತಿಮ್ಮಣ್ಣ, ಪ್ರಕಾಶ್, ಪಿಡಿಒ ಓಬಣ್ಣ ಭಾಗವಹಿಸಿದ್ದರು. ಮುಖಂಡ ಚನ್ನಗಾನಹಳ್ಳಿ ಮಲ್ಲೇಶ್ ಸ್ವಾಗತಿಸಿ, ವಂದಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link