ಹರಪನಹಳ್ಳಿ
ಮಾತೃಭೂಮಿಯ ಸ್ಮರಣ, ವೀರ ಯೋಧರಿಗೆ ನಮನ’ ಎಂಬ ಘೋಷ ವ್ಯಾಕದಡಿ ಬೈಕ್ ಮೂಲಕ ಏಕಾಂಗಿಯಾಗಿ `ದೇಶ ಪರ್ಯಟನೆ’ ಕೈಗೊಂಡಿದ್ದ ಪಟ್ಟಣದ ಸಾಹಸಿ ಯುವಕ ರಾಹುಲ್ ಕೃಷ್ಣ ಅವರು ಸೋಮವಾರ ಹರಪನಹಳ್ಳಿಗೆ ಯಶಸ್ವಿ ಪ್ರವಾಸದೊಂದಿಗೆ ಬಂದಿದ್ದಾರೆ.
ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಎಂದು ಕರೆಯಲ್ಪಡುವ ಜಮ್ಮುಕಾಶ್ಮೀರದ ಸಿಯಾಚಿನ್ ಪ್ರದೇಶವನ್ನು ಮುಖ್ಯ ಸ್ಥಳವಾಗಿಟ್ಟುಕೊಂಡು `ಏಕಾಂಗಿ ಬೈಕ್ ಪ್ರವಾಸ’ ಕೈಗೊಂಡಿದ್ದರು. ಸುದೀರ್ಘ 91 ದಿನಗಳ ಪ್ರವಾಸದಲ್ಲಿ 14 ಸಾವಿರ ಕಿ.ಮೀ ಸುತ್ತಿರುವ 26 ವರ್ಷದ ರಾಹುಲ್, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ನೂರಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ರಾಹುಲ್ ಪಟ್ಟಣದ ನಿವೃತ್ತ ಶಿಕ್ಷಕ ಕೃಷ್ಣಪ್ಪ ಹಾಗೂ ಕವಿಯತ್ರಿ ಪ್ರಭಾವತಿ ದಂಪತಿಗಳ ಏಕೈಕ ಪುತ್ರ. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಎಂ.ಟೆಕ್ (ಸಿವಿಲ್ ಇಂಜಿನಿಯರ್) ಮುಗಿಸಿರುವ ರಾಹುಲ್ ತಮ್ಮ ಬಿಡುವಿನ ವೇಳೆಯಲ್ಲಿ ಈ ಪ್ರವಾಸಕ್ಕೆ ಮುಂದಾಗಿದ್ದರು. ಸೋಮವಾರ ಪಟ್ಟಣದಲ್ಲಿ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಯಶಸ್ವಿ ಯಾತ್ರೆ ಪೂರ್ಣಗೊಳಿಸಿದ್ದಾರೆ.
`ಬೈಕ್ ಮೇಲೆ ರಾಷ್ಟ್ರಧ್ವಜ ಕಟ್ಟಿದ್ದರಿಂದ ಜನರು ನನ್ನ ಬಳಿ ಬಂದು ಮಾತನಾಡಿಸುತ್ತಿದ್ದರು. ನಿಮ್ಮದು ಯಾವ ರಾಜ್ಯ?, ಏಕೆ ಬೈಕ್ ಪ್ರವಾಸ ಕೈಗೊಂಡಿದ್ದರಿ? ದೇಶ ಪರ್ಯಟನೆ ಉದ್ದೇಶವೇನು? ಹೀಗೆ ಪ್ರಶ್ನಿಸುತ್ತಿದ್ದರು. ನನ್ನ ಪ್ರವಾಸದ ಬಗ್ಗೆ ಹಂಚಿಕೊಂಡಾಗ, ಅವರನ್ನು ಮುಂದಿನ ಪ್ರಯಾಣಕ್ಕೆ ಶುಭ ಕೋರುತ್ತಿದ್ದರು. ದೇಶದ ಜನರ ಭಾಷೆ, ಸಂಸ್ಕೃತಿ ಬೇರೆ ಆಗಿದ್ದರೂ ಜನಮಿಡಿತ ಮಾತ್ರ ಒಂದೇ ಆಗಿರುತ್ತಿತ್ತು’ ಎನ್ನುತ್ತಾರೆ ರಾಹುಲ್.
ಮೊದಲು 12 ದಿನದ ಪ್ರಯಾಣ ಮಳೆಯಲ್ಲೇ ಸಾಗಿತು. ಮುಂದೆ ರಾಜಸ್ಥಾನದ ಮರಭೂಮಿ ಆದಾದನಂತರ ಕಾಶ್ಮೀರದ ಶೀತ ವಾತಾವರಣ. ಹೀಗೆ ಒಂದೊಂದು ಪ್ರದೇಶದ ಒಂದೊಂದು ವಾತಾವರಣ ನನ್ನನ್ನು ಸ್ವಾಗತಿಸಿದವು. ಅವೆಲ್ಲವೂ ನನಗೆ ಹೊಸದೊಂದು ಅನುಭವ ನೀಡಿದವು. ಅಲ್ಲಿನ ವಾತಾವರಣವನ್ನು ಆಸ್ವಾದಿಸುತ್ತಾ ಸಾಗಿದೆ ಎನ್ನುತ್ತಾರೆ ರಾಹುಲ್
`ಮೊದಲು ಸಿಯಾಚಿನ್ ಪ್ರದೇಶಕ್ಕೆ ಭೇಟಿ ನೀಡಿ ಮರಳಿ ಬರುವ ಉದ್ದೇಶವಿತ್ತು. 8200 ಕಿ.ಮೀ ಪ್ರಯಾಣದ ದೂರವಾಗಿತ್ತು. ಯಾಕೋ ಮನಸ್ಸು ಕಾಶ್ಮಿರದಿಂದ ಕನ್ಯಾಕುಮಾರಿಗೆ ಪ್ರಯಾಣ ಬಯಸಿದ್ದರಿಂದ ಸುಮಾರು 15 ರಾಜ್ಯ ಮೂಲಕ ತಮಿಳನಾಡಿನ ಕನ್ಯಾಕುಮಾರಿ ತಲುಪಿ ಸ್ವಂತ ಊರಿಗೆ ಬಂದಿದ್ದೇನೆ. ಪ್ರಯಾಣದಲಲ್ಲಿ ಯಾವುದೇ ತೊಂದರೆಗಳಾಗಲಿಲ್ಲ ಎಂದು ರಾಹುಲ್ ಅನುಭವ ಹಂಚಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ