ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ದಾವಣಗೆರೆ:

      ಇತ್ತೀಚೆಗೆ ಕಕ್ಕರಗೊಳ್ಳ ಯುವತಿಯ ಮೇಲೆ ಆತ್ಯಾಚಾರ ಎಸಗಿ, ಕೊಲೆಗೈದಿರುವ ದುಷ್ಕರ್ಮಿಗಳನ್ನು ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿ ಎಐಡಿಎಸ್‍ಒ, ಎಐಡಿವೈಒ, ಎಐಎಂಎಸ್‍ಎಸ್ ಹಾಗೂ ಎಐಯುಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ಯುವತಿಯ ಸಂಬಂಧಿಕರು ಹಾಗೂ ವಿದ್ಯಾರ್ಥಿನಿಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

     ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಂತರ ಸಂಘಟನೆಗಳ ಮುಖಂಡರು ಹಾಗೂ ಹತ್ಯೆಗೊಳಗಾದ ಯುವತಿಯ ಪೋಷಕರು, ಸಂಬಂಧಿಕರು ನಿಯೋಗದ ಮೂಲಕ ಪೂರ್ವ ವಲಯ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

      ಎಐಎಂಎಸ್‍ಎಸ್ ಮುಖಂಡರಾದ ಬನಶ್ರೀ ಮಾತನಾಡಿ, ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಯುವತಿ ರಂಜಿತಾ ಹೊಟ್ಟೆಪಾಡಿಗಾಗಿ ದಾವಣಗೆರೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮಂಗಳವಾರ ರಾತ್ರಿ 8 ಗಂಟೆಗೆ ಕೆಲಸ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಯುವತಿಯನ್ನು ಆವರಗೊಳ್ಳದ ಸಮೀಪದ ನಿರ್ಜನ ಪ್ರದೇಶದಲ್ಲಿರುವ ಮೆಕ್ಕೆಜೋಳದ ಹೊಲ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಹತ್ಯೆ ಗೈದಿರುವುದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಅಶ್ಲೀಲ ಸಿನಿಮಾ ಸಾಹಿತ್ಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರದಾಡುವ ಅಶ್ಲೀಲ ಚಿತ್ರಗಳೇ ಕಾರಣವಾಗಿವೆ. ನಿರ್ಭಯ ಅತ್ಯಾಚಾರ ಪ್ರಕರಣದ ಕುರಿತು ಅತ್ಯಾಚಾರ ಕ್ರೌರ್ಯದ ಮರು ಸೃಷ್ಟಿ ಮಾಡಿದ ಸಾಕ್ಷಾಚಿತ್ರದ ಮೇಲೆ ನಿರ್ಬಂಧ ಹೇರುವ ರಾಜಕಾರಣಿಗಳು, ಅಶ್ಲೀಲ ಚಿತ್ರಗಳನ್ನು ಮಾತ್ರ ನಿಷೇಧಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ, ರಾಜಕಾರಣಿಗಳು ವಿಧಾನಸೌಧದಲ್ಲಿ ಕೂತು ನೀಲಿ ಚಿತ್ರಗಳನ್ನು ನೋಡಲು ಅಶ್ಲೀಲ ಚಿತ್ರಗಳು ಬೇಕಾಗಿವೆ. ಹೀಗಾಗಿ ಅಶ್ಲೀಲ ಚಿತ್ರಗಳನ್ನು ನಿಷೇಧಿಸುತ್ತಿಲ್ಲ ಎಂದು ಕಿಡಿಕಾರಿದರು.

      ಅತ್ಯಾಚಾರದ ಬಗ್ಗೆ ಮಾತನಾಡುವ ತಕ್ಷಣವೇ ಕೆಲವರು ಹೆಣ್ಣು ಮಕ್ಕಳು ಧರಿಸುವ ಬಟ್ಟೆಗಳ ಬಗ್ಗೆ ಮಾತನಾಡುತ್ತಾರೆ. ಇತ್ತೀಚೆಗೆ ನಮ್ಮ ಜಿಲ್ಲೆಯ ಚನ್ನಗಿರಿಯಲ್ಲಿ ಸ್ವಂತ ಚಿಕ್ಕಪ್ಪನೇ ಮೂರು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಮುಗ್ಧ ಮಗು ಯಾವ ಬಟ್ಟೆ ಹಾಕಿದ್ದಳು ಎಂದು ಪ್ರಶ್ನಿಸಿದ ಅವರು, ಮೊದಲು ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಮತ್ತು ವಿಕೃತ ಮನಸ್ಸುಗಳು ಬದಲಾಗಬೇಕು. ಕಕ್ಕರಗೊಳ್ಳದ ಯುವತಿ ರಂಜಿತಾ ಮೇಲೆ ಅತ್ಯಾಚಾರ ನಡೆಸಿ, ಹತ್ಯೆಗೈದಿರುವ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ತ್ವರಿತಗೊಳಿಸಿ, ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿದರು.

      ಕಕ್ಕರಗೊಳ್ಳ ಗ್ರಾಮದ ಮುಮ್ತಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಅನ್ನುವುದು ಮನೆ ಮಾತಾಗಿ ಹೋಗಿದೆ. ಕೆಲ ಪೊಲೀಸ್ ಅಧಿಕಾರಿಗಳಿಗೆ ಅತ್ಯಾಚಾರಿಗಳ ಪರವಾಗಿರುವವರು ಲಂಚಕೊಟ್ಟು ಪ್ರಕರಣ ಮುಚ್ಚಿ ಹಾಕಿರುವ ಹಾಗೂ ಪೊಲೀಸರೇ ಸಂತ್ರಸ್ಥ ಕುಟುಂಬದ ಸದಸ್ಯರನ್ನೇ ಅವಾಚ್ಯಶಬ್ದಗಳಿಂದ ನಿಂದಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅದರೆ, ಇಂಥಹ ಘಟನೆ ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ಮರುಕಳಿಸಲು ಆಸ್ಪದ ನೀಡಬಾರದು. ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

      ರಂಜಿತಾಳ ಸಹೋದರಿ ಪೂಜಾ ಮಾತನಾಡಿ, ನನ್ನ ಅಕ್ಕ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ದುಷ್ಕರ್ಮಿಗಳನ್ನು ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿದರು.

       ಪ್ರತಿಭಟನೆಯಲ್ಲಿ ಮೃತ ರಂಜಿತಾಳ ತಂದೆ ಸಾರತಿ ದ್ಯಾಮಪ್ಪ, ಲಕ್ಕಮ್ಮ, ವಿವಿಧ ಸಂಘಟನೆಗಳ ಮುಖಂಡರುಗಳಾದ ಟಿವಿಎಸ್ ರಾಜು, ನಾಗಜ್ಯೋತಿ, ಮಂಜುನಾಥ ಕುಕ್ಕುವಾಡ, ಮಧು ತೊಗಲೇರಿ, ಸೌಮ್ಯ, ಶಶಿಕುಮಾರ್, ತಿಪ್ಪೇಸ್ವಾಮಿ, ಹರಿಪ್ರಸಾದ್, ಮಂಜುನಾಥ ರೆಡ್ಡಿ, ಸತೀಶ್, ಗುರು ಸೇರಿದಂತೆ ರಂಜಿತಾಳ ಕಕ್ಕರಗೊಳ್ಳ, ಆವರಗೊಳ್ಳ, ಬೂದಿಹಾಳ್ ಗ್ರಾಮಗಳ ಸಂಬಂಧಿಕರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link