ಮಧುಗಿರಿ :
ತಾಲ್ಲೂಕಿನ ಕಸಬಾ ಹೋಬಳಿಯ ಮರಿತಿಮ್ಮನಹಳ್ಳಿಯ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶಾರದಮ್ಮ, ನಿಯೋಜಕರ ನಮೂನೆಯನ್ನು ನೀಡದೆ ಸತಾಯಿಸುತ್ತಿದ್ದಾರೆ, ಸಂಬಂಧಪಟ್ಟ ಚುನಾವಣಾಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಎಂದು ಸೋಮವಾರ ಸಂಘದ ಕಾರ್ಯದರ್ಶಿ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಹಿಳಾ ಹಾಲು ಉತ್ಪಾದಕರ ಸಂಘದ ವತಿಯಿಂದ ಮತದಾನದ ಹಕ್ಕಿನ ಚಲಾವಣೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೆ ಸಂಘದ 10 ಜನ ನಿರ್ದೇಶಕರು ಎಲ್ಲಿದ್ದಾರೊ ಏನೋ ಎಂಬುದೆ ಇಲ್ಲಿಯವರೆವಿಗೂ ತಿಳಿಯದಾಗಿದೆ. ಪ್ರತಿನಿಧಿ ನಿಯೋಜಕರ ನಮೂನೆಯನ್ನು ಅಧ್ಯಕ್ಷೆ ಶಾರದಮ್ಮ ನೀಡದೆ, ಅವರ ಬಳಿಯೆ ಸುಮಾರು 4 ದಿನಗಳಿಂದ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ. ಈ ಬಗ್ಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಮತ್ತು ಸಂಘದ ಬಳಿಯು ಬಂದಿಲ್ಲ ಎಂದು ಮಹಿಳಾ ಕಾರ್ಯದರ್ಶಿ ಮತ್ತು ಗ್ರಾಮಸ್ಥರು ದೂರಿದ್ದಾರೆ.
ಸಂಘದಲ್ಲಿ 10 ಜನ ನಿರ್ದೇಶಕರಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೆಂಬಲಿತರು ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಯನ್ನು ಠರಾವು ಪುಸ್ತಕದಲ್ಲಿ ಬರೆಯಲಾಗಿದೆ. ಆದರೆ ನಿಯೋಜಕರ ಹೆಸರನ್ನು ನಮೂದಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡದೆ ಉಡಾಫೆ ಮಾತುಗಳನ್ನಾಡುತ್ತಿದ್ದಾರೆ. ನಾನು ಕಾರ್ಯದರ್ಶಿಯಾಗಿ 10 ವರ್ಷಗಳ ಸೇವೆ ಸಲ್ಲಿಸಿರುವ ಅನುಭವವಿದೆ. ನಿರ್ದೇಶಕರು ತಮ್ಮ ಮತಗಳನ್ನು ಯಾರಿಗೆ ಬೇಕೊ ಅವರಿಗೆ ಚಲಾಯಿಸಿಕೊಳ್ಳಲಿ, ನನ್ನ ಕರ್ತವ್ಯ ನನ್ನದು. ಗುಂಡ್ಲಹಳ್ಳಿ ಗ್ರಾಮದ ಮೂಡ್ಲಪ್ಪ ಎನ್ನುವವರು ಈ ವಿಚಾರದಲ್ಲಿ ಸಂಬಂಧವಿಲ್ಲದಿದ್ದರು ನಮ್ಮ ಗ್ರಾಮಕ್ಕೆ ಬಂದು ಡೈರಿ ಚುನಾವಣೆಯ ವಿಚಾರದಲ್ಲಿ ನಾವು ಹೇಳಿದಂತೆ ಕೇಳಬೇಕೆಂದು ಬಲವಂತವಾಗಿ ಒತ್ತಡ ಏರುತ್ತಿದ್ದಾರೆ ಎಂದು ಕಾರ್ಯದರ್ಶಿ ಲೋಕಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾಜಿ ಗ್ರಾಪಂ ಸದಸ್ಯ ವೀರಕ್ಯಾತಪ್ಪ ಮಾತನಾಡಿ, ಹಾಲಿ ತುಮುಲ್ ಅಧ್ಯಕ್ಷರ ಮಾತಿನಂತೆ ಕೆಲ ಅಧಿಕಾರಿಗಳು ವರ್ತಿಸುತ್ತಿದ್ಧಾರೆ. ಅಧಿಕಾರಗಳ ಬಳಿ ನಿಮ್ಮ ಸಂಘದ ಡೆಲಿಗೇಟ್ ನಮೂನೆಯನ್ನು ಕಳುಹಿಸಿ ಕೊಡುತ್ತೇನೆಂದು ಹೇಳಲು ಇವರ್ಯಾರು? ನಮೂನೆಯನ್ನು ಅಂಚೆ ಮೂಲಕ ಅಥವಾ ಕಾರ್ಯದರ್ಶಿಗಳು ತಲುಪಿಸಬೇಕು. ಆದರೆ ಹಾಲಿ ಅಧ್ಯಕ್ಷರೆ ಕಾನೂನನ್ನು ಉಲ್ಲಂಘಿಸಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲ್ಲರೂ ಒಂದೆ ಆಗಿದ್ದು, ನ್ಯಾಯ ಸಮ್ಮತ ಚುನಾವಣೆ ನಡೆಸುವಂತೆ ವೀರಕ್ಯಾತಪ್ಪ ಆಗ್ರಹಿಸಿದ್ದಾರೆ.
ಗ್ರಾಮದ ಮುಖಂಡ ರಾಜಣ್ಣ ಮಾತನಾಡಿ, 13 ನೆ ತಾರೀಖಿನಂದು ಚುನಾವಣೆಯೆಂದು ಮತದಾನದ ಹಕ್ಕಿನ ಬಗ್ಗೆ ಸಂಘದ ವತಿಯಿಂದ ಕೆಲವು ದಾಖಲೆಗಳನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಕಾಯದರ್ಶಿಯನ್ನು ವಿಚಾರಿಸಿದರೆ ನನಗೆ ಡೆಲಿಗೇಟ್ ನಮೂನೆಯನ್ನು ಸಂಬಂಧಪಟ್ಟವರು ತಲುಪಿಸಿಲ್ಲ. ಸದಸ್ಯರ್ಯಾರೂ ಸಹಿಯನ್ನೂ ಹಾಕಿಲ್ಲ, ಹಾಜರಾಗಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೆ ಯಾವ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಕೆಂಬ ಬಗ್ಗೆ ನಿರ್ಧಾರ ಮಾಡುವ ಪ್ರಕ್ರಿಯೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ