ಎಲ್ಲಾ ಕೆರೆಗಳಿಗೂ ಹೇಮಾವತಿ ನೀರನ್ನು ಹರಿಸಲು ಸೂಕ್ತ ಕ್ರಮ

ಗುಬ್ಬಿ

      ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರನ್ನು ಹರಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಂಡಿದ್ದು ಹಂತ ಹಂತವಾಗಿ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರನ್ನು ಹರಿಸುವುದಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

     ತಾಲ್ಲೂಕಿನ ನಿಟ್ಟೂರು ಕಾರೆಹಳ್ಳಿ ಎಸ್ಕೇಪ್ ಗೇಟ್, ಸೋಮಲಾಪುರ ಎಸ್ಕೇಟ್ ಗೇಟ್ ಬಳಿ ತಾಲ್ಲೂಕಿನ ಹಲವು ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಹೇಮಾವತಿ ನಾಲೆಯ ಎಸ್ಕೇಪ್‍ಗಳನ್ನು ಎತ್ತುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿನ ಕಡಬ, ನಿಟ್ಟೂರು, ಗುಬ್ಬಿ, ಎಂ.ಹೆಚ್.ಪಟ್ಣ ಸೇರಿದಂತೆ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರನ್ನು ಹರಿಸಲಾಗುವುದೆಂದು ತಿಳಿಸಿದರು.

      ಮಾಜಿ ಸಂಸದ ಜಿ.ಎಸ್.ಬಸವರಾಜು ಅವರಿಗೆ ಚುನಾವಣೆ ಹತ್ತಿರ ಬಂದಾಗ ಮಾತಿನ ಚಟ ಶುರುವಾಗುತ್ತದೆ. ಕಳೆದ 15 ವರ್ಷಗಳಿಂದಲೂ ತಾಲ್ಲೂಕಿನ ಕೆರೆಗಳಿಗೆ ನೀರುಹರಿಸುತ್ತಲೇ ಬಂದಿದ್ದೇನೆ. ನನಗೆ ಕೆರೆಗಳಿಗೆ ನೀರನ್ನು ಹೇಗೆ ಹರಿಸಬೇಕೆಂಬ ಬಗ್ಗೆ ಮಾಹಿತಿ ಇದೆ. ಈ ಭಾರಿ ಸ್ವಲ್ಪ ವಿಳಂಬವಾಗಿದೆ. ಆದರೂ ನಿಯಮಾನುಸಾರ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವ ಮೂಲಕ ಕೆರೆಗಳನ್ನು ತುಂಬಿಸುವಂತಹ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

     ಅಧಿಕಾರ ಮುಖ್ಯವಲ್ಲ. ಅದು ಬರುತ್ತದೆ ಹೋಗುತ್ತದೆ. ಆದರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವಂತಹ ಮಹತ್ವದ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದ ಅವರು, ಈ ಭಾರಿ ಇನ್ನೂ ಮೂರು ತಿಂಗಳು ನಾಲೆಯಲ್ಲಿ ನೀರು ಹರಿಯಲಿದ್ದು ನೀರು ಹರಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

        ಮಾಜಿ ಸಂಸದರು ಪತ್ರಿಕಾ ಗೋಷ್ಠಿಯಲ್ಲಿ ನಾನು ನೀರಗಂಟಿಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈಗ ಅವರಿಗೆ ವಯಸ್ಸಾಗಿದೆ. ನೀರಗಂಟಿ ಕೆಲಸ ಮಾಡಲು ಸಾಧ್ಯವಿಲ್ಲ. ವಯಸ್ಸು ಇದ್ದಾಗ ನೀರಗಂಟಿ ಕೆಲಸ ಮಾಡಿದ್ದರೆ ಚನ್ನಾಗಿರುತ್ತಿತ್ತು. ಆಗ ಮಾಡಿದ್ದರೆ ಜಿಲ್ಲೆಯ ರೈತರು ಮತ್ತು ಜನರು ಚೆನ್ನಾಗಿರುತ್ತಿದ್ದರು ಎಂದರು.

      ಇದೇ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಲಕ್ಷ್ಮಿರಂಗಯ್ಯ, ಮುಖಂಡರಾದ ಕೃಷ್ಣಮೂರ್ತಿ, ವೆಂಕಟೇಶ್, ಬಾಲಕೃಷ್ಣ, ಗಿರೀಶ್, ಗಂಗರಾಜು, ಪಟೇಲ್‍ಶಶಿ, ಪ್ರಕಾಶ್, ನರಸಿಂಹಯ್ಯ, ನರಸೇಗೌಡ, ಹೇಮಾವತಿ ಅಧಿಕಾರಿ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link