ರೈಲು ಎಂಜಿನ್‌ಗೆ ಸಿಲುಕಿ ಯುವಕ ಸಾವು : ಒಂದು ಕಿಮೀ ಕ್ರಮಿಸಿದ ಮೃತದೇಹ

ತುಮಕೂರು:

      ಇಂದು ಬೆಳ್ಳಂಬೆಳಗ್ಗೆ ನಗರದ ಉಪ್ಪಾರಹಳ್ಳಿ ಸೇತುವೆ ಬಳಿ ಯುವಕನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು, ಈ ಯುವಕನ ಮೃತ ದೇಹ ಇಂಜಿನ್ ಗೆ ಸಿಲುಕಿದ್ದ ಕಾರಣ ರೈಲ್ವೇ ನಿಲ್ದಾಣದವರೆಗೆ ಕ್ರಮಿಸಿತ್ತು.

          ತುಮಕೂರು ರೈಲ್ವೆ ನಿಲ್ದಾಣದಲ್ಲಿ ರೈಲು ಬಂದ ತಕ್ಷಣ ರೈಲು ಇಂಜಿನಿಗೆ ಸಿಲುಕಿದ್ದ ದೇಹವನ್ನು ನೋಡಿದ ಪ್ರಯಾಣಿಕರು ಗಾಬರಿಯಿಂದ ರೈಲನನ್ನೇ ನೋಡುತ್ತ ನಿಂತರು. ಯಶವಂತಪುರ ರೈಲ್ವೆ ನಿಲ್ದಾಣದಿಂದ ತುಮಕೂರಿಗೆ ಬರುವ ಮಾರ್ಗ ಮಧ್ಯದಲ್ಲಿ ಎಂಜಿನ್‌ಗೆ ಯುವಕನ ದೇಹ ಸಿಲುಕಿದ್ದು, ಕೆಲ ಕಾಲ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು.

          ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಉಪ್ಪಾರ ಸೇತುವೆ ಬಳಿ ಬರುತ್ತಿದ್ದಂತೆ ಯುವಕನೊಬ್ಬ ರೈಲಿಗೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಈ ವೇಳೆ ಆತನ ಮೃತದೇಹ ಎಂಜಿನ್ ಮುಂಭಾಗ ಸಿಲುಕಿಕೊಂಡಿದ್ದರಿಂದ  ಮೃತದೇಹ ಸುಮಾರು ಒಂದು ಕಿ,ಮೀ ಕ್ರಮಿಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಎಂಜಿನ್‌ನಲ್ಲಿ ಮೃತದೇಹ ನೋಡಿ ಕೂಗಿಕೊಂಡಿದ್ದಾರೆ, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಎಂಜಿನ್‌ಗೆ ಸಿಲುಕಿಕೊಂಡಿದ್ದ ದೇಹವನ್ನು ಇಳಿಸಿದ್ದಾರೆ.

          ಮೃತ ವ್ಯಕ್ತಿ ಯಾರೆಂಬುದು ಇದುವರೆಗೂ ತಿಳಿದುಬಂದಿಲ್ಲ. ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಈ ಘಟನೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಇದು ಆತ್ಮಹತ್ಯೆಯೋ ಅಥವಾ ತಿಳಿಯದೇ ನಡೆದಿರುವ ಘಟನೆಯೋ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ