ಹುಳಿಯಾರು
ಹುಳಿಯಾರಿನಲ್ಲಿ ಸೋಮವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದ್ದು ಬಿಸಿಲಿನಿಂದ ಬಸವಳಿದಿದ್ದ ರೈತರ ಮುಖದಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.
ಮಧ್ಯಾಹ್ನ ಬಿರು ಬಿಸಿಲಿಗೆ ತಕ್ಕಂತೆ ಸಂಜೆ ಜೋರು ಮಳೆ ಸುರಿಯಿತು. ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು ಅಲ್ಲಲ್ಲಿ ಹಳ್ಳಗಳಲ್ಲಿ, ತಡೆಅಣೆಗಳಲ್ಲಿ, ತೋಟಗಳಲ್ಲಿ ನೀರು ನಿಂತಿದೆ. ಸೊರಗಿದ್ದ ರಾಗಿ ಈ ಮಳೆಯಿಂದ ದಡ ಸೇರುವ ವಿಶ್ವಾಸ ತಂದಿದೆ. ತಡವಾಗಿ ಬಿತ್ತಿದ್ದ ಹುರುಳಿ, ಸಾವೆ, ಜೋಳ ಮತ್ತಿತರರ ಬೆಳೆಗಳಿಗೆ ಅನುಕೂಲವಾಗಿದೆ.
ಹುಳಿಯಾರು ಪಟ್ಟಣದಲ್ಲಿ ಮಳೆಯ ರಭಸಕ್ಕೆ ಬಿಸಿಎಂ ಹಾಸ್ಟಲ್, ಪರಿವೀಕ್ಷಣಾ ಮಂದಿರ, ಬಾಲಾಜಿ ಚಿತ್ರ ಮಂದಿರದ ಬಳಿಗೆ ಮರಗಳು ಧರೆಗುರುಳಿವೆ. ಪ್ರವಾಸ ಮಂದಿರದ ಬಳಿ ಮರ ಬಿದ್ದ ಪರಿಣಾಮ ಮರದ ಕೆಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಜಖಂಗೊಂಡಿದೆ. ಉಳಿದಂತೆ ಇನ್ನೆಲ್ಲೂ ತೊಂದರೆಗಳಾಗಿಲ್ಲ.
ಹುಳಿಯಾರು ಹೋಬಳಿ ಯಗಚಿಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಹೆಚ್ಚು ಆಲಿಕಲ್ಲು ಮಳೆ ಬಿದ್ದಿದೆ. ಕೆ.ಸಿ.ಪಾಳ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ದುರ್ಗಮ್ಮನ ದೇವಸ್ಥಾನದ ಬಳಿ ಕೆರೆಯಂತೆ ನೀರು ಸಂಗ್ರಹವಾಗಿದೆ. ಉಳಿದಂತೆ ಹೋಬಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಗಾಳಿ ಸಮೇತ ಉತ್ತಮ ಮಳೆಯಾಗಿದ್ದು ಯಾವುದೇ ನಷ್ಟದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
