ತುರುವೇಕೆರೆ ಬರಪೀಡಿತ ಪಟ್ಟಿಗೆ ಸೇರ್ಪಡೆ: ಧನ್ಯವಾದ ಸಲ್ಲಿಸಿದ ಶಾಸಕ

ತುರುವೇಕೆರೆ

          ಕ್ಷೇತ್ರದ ಬಿಜೆಪಿ ಶಾಸಕ, ರೈತರು, ರೈತ ಸಂಘದ ಪದಾಧಿಕಾರಿಗಳ ಹೋರಾಟಕ್ಕೆ, ಉಪ ಮುಖ್ಯಮಂತ್ರಿ, ಸಚಿವರು, ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತುರುವೇಕೆರೆಯನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸರ್ಕಾರ ಸೇರಿಸಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಮಸಾಲಾಜಯರಾಮ್ ತಿಳಿಸಿದರು.

         ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲನೆ ಹಂತದಲ್ಲಿ ಸರ್ಕಾರ ಜಿಲ್ಲೆಯ 9 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ ತುರುವೇಕೆರೆ ತಾಲ್ಲೂಕನ್ನು ಮಾತ್ರ ಪಟ್ಟಿಯಿಂದ ಕೈಬಿಟ್ಟಿತ್ತು. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದು ಮತ್ತು ನಿಗದಿತ ಪ್ರಮಾಣದಲ್ಲಿ ತುರುವೇಕೆರೆಗೆ ನಾಲಾ ನೀರು ಹರಿಯದಿರುವ ಬಗ್ಗೆ ರೈತಪರ ಸಂಘಟನೆಗಳು ಒಗ್ಗೂಡಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗಿತ್ತು.

         ನಂತರ ಸಚಿವರಾದ ಆರ್.ವಿ.ದೇಶಪಾಂಡೆ, ಶ್ರೀನಿವಾಸರೆಡ್ಡಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಎಂಜಿನಿಯರ್‍ನ್ನು ಭೇಟಿ ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ತಾಲ್ಲೂಕಿಗೆ ಹೇಮಾವತಿ ನಾಲಾ ನೀರು ಬಿಡುವುದು ಮತ್ತು ತುರುವೇಕೆರೆ ಬರಪೀಡತ ಪ್ರದೇಶದ ಪಟ್ಟಿಗೆ ಸೇರಿಸುವಂತೆ ಪ್ರತಿ ಜಿಲ್ಲಾ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತಿದ ಪ್ರತಿರೂಪಕವಾಗಿ ಇಂದು ಕ್ಷೇತ್ರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

       ತುರುವೇಕೆರೆ ಬರಪೀಡತವೆಂದು ಘೋಷಣೆಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದ್ದು, ಆ ಹಣದಿಂದ ಸಣ್ಣ ಮತ್ತು ಅತಿ ಸಣ್ಣ ಬಡ ರೈತರಿಗೆ ಎನ್‍ಆರ್‍ಇಜಿ ಯೋಜನೆಯಡಿ ಕೆಲಸ ನೀಡುವುದು, ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಿಸುವುದು, ಸಾಕು ಪ್ರಾಣಿಗಳಿಗೆ ಮೇವು ಒದಗಿಸುವುದು ಮತ್ತು ಅಗತ್ಯವಿರುವ ಕಡೆ ಗೋಶಾಲೆ ತೆರೆಯುವುದು ಸೇರಿದಂತೆ ಇನ್ನಿತರ ಯೋಜನೆಗಳಿದ್ದು ಅರ್ಹರು ಇದರ ಲಾಭ ಪಡೆಯಬಹುದಾಗಿದೆ ಎಂದರು.

        ಹೀಗಾಗಲೇ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲಾ ನೀರು ಹರಿಸಲು ಪ್ರತಿ ದಿನ ನಾಲಾ ತೂಬ್‍ಗಳ ಬಳಿ ಎಂಜಿನಿಯರ್‍ಗಳೊಂದಿಗೆ ತೆರಳಿ ತಾಲ್ಲೂಕಿನ ಕೆರೆಗಳಿಗೆ ನೀರು ಬಿಡಿಸಲಾಗುತ್ತಿದೆ. ಆಗೆಯೇ ಸಿಎಸ್.ಪುರ ಹೋಬಳಿ ಹೇಮಾವತಿ ನಾಲಾ ನೀರು ಕಂಡು 11 ವರ್ಷಗಳೇ ಕಳೆದಿವೆ. ಆದರೆ ನನ್ನ ಪರಿಶ್ರಮದಿಂದ ಆ ಭಾಗದ ಕೆರೆಗಳಿಗೂ ನೀರು ಈ ಬಾರಿ ಹರಿಸಲಾಗಿದೆ. ಈಗಾಗಲೇ ಸಂಬಂಧಪಟ್ಟ ಸಚಿವರು ಮತ್ತು ಎಂಜಿನಿಯರ್‍ಗಳಿಗೆ ಫೆಬ್ರುವರಿ ತಿಂಗಳವರೆಗೂ ತುರುವೇಕೆರೆಗೆ ನೀರು ಹರಿಯಿಸುವಂತೆ ಮನವಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಭಾಗಶಃ ಕೆರೆಗಳು ಭರ್ತಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

       ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್‍ಗೌಡ ಮಾತನಾಡಿ ನಾವುಗಳು ಅಂದು ಹೋರಾಟ ಮಾಡಿದ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲ ಜನಪರ ಸಂಘಟನೆಗಳು, ನಾಗರೀಕರು, ವ್ಯಾಪಾರಸ್ಥರು, ವಾಹನ ಮಾಲೀಕರು ಸಹಕಾರ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.

       ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ, ಮಾಜಿ ಶಾಸಕರು ಚುನಾವಣಾ ಸೋಲಿನ ಹತಾಶ ಭಾವನೆಯಿಂದ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಮತ್ತೊಮ್ಮೆ ಚುನಾವಣೆ ಕನಸು ಕಾಣುತ್ತಿರುವುದು ತಪ್ಪು. ಇನ್ನು ನಾಲ್ಕೂವರೆ ವರ್ಷ ಮಸಾಲಾ ಜಯರಾಂ ಅವರೆ ತಾಲ್ಲೂಕಿನ ಶಾಸಕರು ಎಂದರು.

      ತಾ|| ಬಿಜೆಪಿ ಅಧ್ಯಕ್ಷ ದುಂಡ ರೇಣುಕಪ್ಪ, ಎಪಿಎಂಸಿ ಹಾಲಿ ನಿರ್ದೇಶಕ ವಿ.ಟಿ.ವೆಂಕಟರಾಮ್ ಮಾತನಾಡಿ, ಅಂದು ಬರಪೀಡಿತ ಪ್ರದೇಶಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಶಾಸಕರು ಪಕ್ಕದಲ್ಲೇ ಹೋದರೂ ಸಹಾ ಹೋರಾಟಕ್ಕೆ ಬೆಂಬಲ ಸೂಚಿಸಲಿಲ್ಲ. ಅವರಿಗೆ ತಾಲ್ಲೂಕಿನ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಅವರ ಹಿಂಬಾಲಕರ ಹೇಳಿಕೆ ಅಸಂಬದ್ದ. ತಾಲ್ಲೂಕಿನ ಜನತೆ ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ತಾಲ್ಲೂಕಿಗೆ ಮಸಾಲ ಜಯರಾಂ ಮುಖ್ಯಮಂತ್ರಿ ಎಂದರು.

       ಇದೇ ಸಂದರ್ಭದಲ್ಲಿ ಹೋರಾಟಕ್ಕೆ ಸಹಕರಿಸಿದ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂ ಪಾಷಾ, ಮುಖಂಡರುಗಳಾದ ಹೇಮಚಂದ್ರು, ಅಬಲುಕಟ್ಟೆರಾಮಣ್ಣ, ಅರಳಿಕೆರೆಶಿವಯ್ಯ, ಚಿದಾನಂದ್, ಯು.ಬಿ.ಸುರೇಶ್, ಮುದ್ದೇಗೌಡ, ಕಾಂತರಾಜು, ಮಹೇಶ್, ಗಿರಿಯಪ್ಪ, ರಾಮೇಗೌಡ, ಬಸವರಾಜು ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link