ಬೆಂಗಳೂರು
ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಸಿಕ್‍ನಲ್ಲಿರುವ ದೀಕ್ಷಾ ಭೂಮಿಗೆ ತೆರಳುವ ಯಾತ್ರಾರ್ಥಿಗಳಿಗೆ ರಾಜ್ಯದಿಂದ 23 ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸೌಧ ಮುಂಭಾಗ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಪರಮೇಶ್ವರ್, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಾಸಿಕ್‍ನಲ್ಲಿ ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದ ಈ ಭೂಮಿಗೆ ಲಕ್ಷಾಂತರ ಯಾತ್ರಾರ್ಥಿಗಳು ತೆರಳಿ ಪ್ರಾರ್ಥನೆ ಸಲ್ಲಿಸಲು ನಾಸಿಕ್‍ಗೆ ತೆರಳುತ್ತಾರೆ ಎಂದರು.
ಬೆಂಗಳೂರು ಹಾಗೂ ಕಲಬುರ್ಗಿಯಿಂದಲೂ ತೆರಳುವ ಯಾತ್ರಾರ್ಥಿಗಳಿಗೆ ಒಟ್ಟು 22 ಐರಾವತ ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ 3 ಬಸ್‍ಗಳು ಕಲಬುರ್ಗಿಯಿಂದ ತೆರಳಲಿವೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ಹಜ್ ಮಾದರಿಯಲ್ಲೇ ಈ ಪುಣ್ಯಸ್ಥಳವು ಪ್ರಸಿದ್ದಿ ಪಡೆದುಕೊಳ್ಳಲಿದೆ. ಒಂದು ವಾರದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ನಾಗ್ಪುರಕ್ಕೆ ತೆರಳಲಿದ್ದು, ಹಜ್ ಮಾದರಿಯಲ್ಲಿ ಆ ಪುಣ್ಯ ಕ್ಷೇತ್ರ ಜನಪ್ರಿಯಗೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಡಾ.ವೆಂಕಟಸ್ವಾಮಿ, ಮಾವಳ್ಳಿ ಶಂಕರ್ ಮತ್ತಿತರರು ಇದ್ದರು. ಇದೇ ವೇಳೆ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
