ಹುಳಿಯಾರು
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರವೂ ಸಹ ಉತ್ತಮ ಮಳೆಯಾಗಿದ್ದು ಮಳೆಗೆ ಮನೆಯ ಗೋಡೆ ಕುಸಿದು, ಸಿಡಿಲಿಗೆ 5 ಕುರಿಗಳು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.
ಹುಳಿಯಾರು 2 ನೇ ಬ್ಲಾಕ್ನ ವಾಸಿ ಮಲ್ಲಿಗಮ್ಮ ಲೇಟ್ ಪಡಿಯಪ್ಪ ಅವರ ವಾಸದ ಮನೆಯ ಹಿಂಭಾಗದ ಗೋಡೆ ಕುಸಿದಿದೆ. ಪರಿಣಾಮ ಮಂಚ, ಫ್ಯಾನ್, ಸೇರಿದಂತೆ ದಿನಸಿ, ಬಟ್ಟೆ ಇತರೆ ದಿನಬಳಕೆ ವಸ್ತುಗಳು ಜಖಂ ಆಗಿ ಅಪಾರ ನಷ್ಟ ಸಂಭವಿಸಿದೆ.
ಸಮೀಪದ ಕೆ.ಸಿ.ಪಾಳ್ಯದಲ್ಲಿ ವಾಸದ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದಿದೆಯಲ್ಲದೆ ಸರಿಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳ ಹೆಂಚುಗಳು ಹಾರಿ ಹೋಗಿವೆ. ಕೆಲ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದಿ ಇಡೀ ದಿನ ಕತ್ತಲೆಯಲ್ಲಿ ದಿನದೂಡುವಂತಾಗಿತ್ತು.
ಸೋಮನಹಳ್ಳಿ ಮಜುರೆ ಹೊನ್ನಯ್ಯನಹಟ್ಟಿ ಗ್ರಾಮದ ಲಕ್ಷ್ಮಯ್ಯ ಅವರ 5 ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಸಿಡಿಲಿಗೆ ಸಿಕ್ಕ ಗುಂಪು ಕುರಿಗಳ ಪೈಕಿ 5 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಸ್ಥಳಕ್ಕೆ ಗಾಣಧಾಳು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ನೇತ್ರಾವತಿ ಹಾಗೂ ಸಿಬ್ಬಂದಿ ವೆಂಕಟಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ