ಮೈಸೂರು:
ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಹಬ್ಬ ಒಂದೆಡೆ ಮನೆ ಮಾಡಿದ್ದರೆ ಇತ್ತ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಾಯಿ ಪುಟ್ಟಚಿನ್ನಮ್ಮಣಿ ನಿಧನದ ಹಿನ್ನೆಲೆ ಅರಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ದಸರಾ ಸಮಯದಲ್ಲೇ ಅವರು ನಿಧನರಾಗಿರುವುದರಿಂದ ದಸರಾದ ಸಾಂಪ್ರದಾಯಿಕ ಆಚರಣೆ ಹಾಗೂ ಅರಮನೆಯ ಖಾಸಗಿ ದಸರಾದ ಮೇಲೆ ಕರಿ ನೆರಳು ಬೀಳುವ ಸಾಧ್ಯತೆ ಇದೆ. ಆದರೆ, ರಾಜ್ಯ ಸರಕಾರ ನಡೆಸುತ್ತಿರುವ ದಸರಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ, ವಿಶ್ವವಿಖ್ಯಾತ ಜಂಬೂ ಸವಾರಿ ಎಂದಿನಂತೆ ನಡೆಯಲಿದೆ.
ತಮ್ಮ ಅಜ್ಜಿ ಅಗಲಿದ ಹಿನ್ನೆಲೆಯಲ್ಲಿ ರಾಜ ಯದುವೀರ್ ಸರಳವಾಗಿ ಪೂಜೆ ಸಲ್ಲಿಸಲಿದ್ದಾರೆ. ವೈಭವೋಪೇತವಾಗಿ ಬೆಳ್ಳಿ ಪಲ್ಲಕ್ಕಿ ಏರಿ ಯದುವೀರ್ ವಿಜಯ ಯಾತ್ರೆ ಮಾಡುವುದನ್ನು ರದ್ದುಗೊಳಿಸಲಾಗಿದ್ದು, ಕೇವಲ ಭುವನೇಶ್ವರಿ ದೇಗುಲದಲ್ಲಿ ಬನ್ನಿ ಮಂಟಪದಲ್ಲಿ ಪೂಜೆ ನಡೆಸಲು ಚಿಂತನೆ ನಡೆಸಲಾಗಿದೆ.
ರಥದಲ್ಲಿ ತೆರಳುವ ಬದಲು ಕಾರಿನಲ್ಲಿ ತೆರಳಲಿರುವ ರಾಜ ಯದುವೀರ್, ಪಂಚಲೋಹದ ರಥದ ಅಡ್ಡಪಲ್ಲಕ್ಕಿಯಲ್ಲಿ ಕತ್ತಿಗಳ ಮಾತ್ರ ವಿಜಯಯಾತ್ರೆ ನಡೆಯಲಿದೆ. ಪ್ರಮೋದಾ ದೇವಿ ಅವರು, ಧಾರ್ಮಿಕ ಪೂಜಾ ವಿಧಾನಗಳ ಬಗ್ಗೆ ಅರಮನೆಯಲ್ಲಿ ಪುರೋಹಿತರೊಂದಿಗೆ ಚರ್ಚೆ ನಡೆಸಿದ್ದು, ಜಟ್ಟಿ ಕಾಳಗ ಕೂಡ ಸ್ಥಗಿತಗೊಳಿಸಿದೆ.
ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ