ದಾವಣಗೆರೆ:
ನಾಳೆ (ಅ.22ರಂದು) ಬೆಳಿಗ್ಗೆ 11 ಗಂಟೆಗೆ ನಗರದ ಅರುಣ ಚಿತ್ರ ಮಂದಿರದ ಬಳಿಯ ಹಳೇ ವಾಣಿ ಹೋಂಡಾ ಶೋರೂಮ್ ಸ್ಥಳದಲ್ಲಿ ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣಾ ಕಾರ್ಯಾಲಯದ ಉದ್ಘಾಟನೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆಗೆ ಗಣಹೋಮದ ಮೂಲಕ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಹಾಲಿ ಮತ್ತು ಮಾಜಿ ಶಾಸಕರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ, ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಸಹ ತೆರೆಯಲಾಗುವುದು. ಇದಕ್ಕಾಗಿ ಪಕ್ಷದಿಂದ 20 ಜನರನ್ನು ನಿಯೋಜಿಸಲಾಗಿದೆ. ಬಿಜೆಪಿ ಸಾಧನೆಗಳನ್ನು ಜನರ ಮನೆ-ಮನೆಗೆ ತಲುಪಿಸುವ ಜೊತೆಗೆ ಸಾರ್ವಜನಿಕ ದೂರು, ಅಹವಾಲು ಸ್ವೀಕಾರ, ಸದಸ್ಯತ್ವ ಪ್ರಕ್ರಿಯೆಗಳನ್ನು ಚುನಾವಣಾ ಕಾರ್ಯಾಲಯದಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಕೇವಲ ಚುನಾವಣೆಗೆ ಮಾತ್ರ ಕಾರ್ಯಾಲಯ ತೆರೆಯುತ್ತಿಲ್ಲ. ಪಕ್ಷದ ಸಂಘಟನೆ, ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಪಕ್ಷ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಕಳೆದ ಚುನಾವಣೆಯಲ್ಲೂ ಸಹ ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಎಲ್ಲ ಪಕ್ಷಗಳೂ ಸೇರಿಕೊಂಡೇ ಬಿಜೆಪಿಯನ್ನು ಎದುರಿಸಿದ್ದವು. ಈಗಲೂ ಆ ಎಲ್ಲಾ ಪಕ್ಷಗಳು ಒಂದಾಗಿ ಬಂದರೂ, ಬಿಜೆಪಿಯು ಒಬ್ಬಂಟಿಯಾಗಿ ಎದುರಿಸುವಷ್ಟು ಬಲಿಷ್ಠವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ.ರಮೇಶ್ ನಾಯ್ಕ, ಎ.ಸಿ.ರಾಘವೇಂದ್ರ, ಹೇಮಂತ್ ಕುಮಾರ್, ಎಲ್.ಡಿ.ಗೋಣೆಪ್ಪ, ಆನಂದರಾವ್ ಶಿಂಧೆ, ಟಿಂಕರ್ ಮಂಜಣ್ಣ, ಅಕ್ಕಿ ಚಂದ್ರು, ಪ್ರವೀಣ್ ಜಾಧವ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
