ಶಿರಾ
ದೈವತ್ವದ ಭಾವನೆಗಳನ್ನು ಮನದಲ್ಲಿ ಹಿಡಿದಿಡುವ ಶಕ್ತಿ ದುರ್ಗಾಮಾತೆಗೆ ಇದ್ದು ದೇಶದಲ್ಲಿ ಆಚರಿಸುವ ಶಕ್ತಿ ದೇವತೆಯಾದ ಶ್ರೀ ದುರ್ಗೆಯ ಆರಾಧನೆಯಿಂದ ಭಕ್ತಿ ತನ್ಮಯತೆ ಸಾಧ್ಯವಿದೆ. ಶರನ್ನವರಾತ್ರಿಯು ದೇಶದ ಜನರಲ್ಲಿ ಶ್ರದ್ಧಾಭಕ್ತಿಯನ್ನು ಮೂಡಿಸುತ್ತದೆಯಲ್ಲದೆ ಧಾರ್ಮಿಕ ಭಾವನೆಗಳನ್ನು ಗರಿಗೆದರಿಸಿ ದೇಶದ ಸಂಕಷ್ಟಗಳ ನಿವಾರಣೆಗೆ ಕಾರಣವಾಗುತ್ತದೆ ಎಂದು ಶಾಸಕ ಬಿ.ಸತ್ಯನಾರಾಯಣ್ ಹೇಳಿದರು.
ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಶನಿವಾರ ಕೈಗೊಳ್ಳಲಾಗಿದ್ದ ಅದ್ದೂರಿ ಸಿಡಿಮದ್ದಿನ ಕಾರ್ಯಕ್ರಮ ಹಾಗೂ ರಸ ಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
9 ದಿವಸಗಳ ಅವಧಿಯಲ್ಲಿ ಆದಿಶಕ್ತಿಯನ್ನು ನವವಿಧಗಳಲ್ಲಿ ಪೂಜಿಸಲಾಗುತ್ತದೆಯಲ್ಲದೆ, ನಮ್ಮಲ್ಲಿನ ಕೊಳಕನ್ನು ತೆಗೆದು ಸದ್ಭಾವನೆಗಳ ಬೀಜವನ್ನು ಬಿತ್ತುವ ಮೂಲಕ ಎಲ್ಲರೂ ಒಂದೆಂಬ ಬೀಜಾಂಕುರವನ್ನು ದುರ್ಗಾಮಾತೆಯು ಕರುಣಿಸುವಂತೆ ಪ್ರಾರ್ಥಿಸುವುದು ಅಗತ್ಯವಾಗಿದೆ ಎಂದರು.
ಶಿರಾ ನಗರದಲ್ಲಿನ ಶ್ರೀ ದುರ್ಗಾ ಮಾತೆಯು ಗ್ರಾಮ ದೇವತೆಯೂ ಆಗಿದ್ದು ಈ ಆಲಯದ ದೇವತೆಗೆ ಐತಿಹ್ಯವೇ ಇದೆ. ನಗರವನ್ನು ಕಾಯುವ ಶಕ್ತಿ ಈ ದುರ್ಗಾಮಾತೆಗಿದ್ದು ನಗರದಲ್ಲಿ ನಡೆಯುವ ಶರನ್ನವರಾತ್ರಿ ಎಲ್ಲರ ಕಣ್ಮನ ಸೆಳೆಯುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಯುವಕ ಮಿತ್ರರು ಸೇರಿ ಕೈಗೊಂಡಿರುವ ಸಿಡಿಮದ್ದಿನ ಕಾರ್ಯಕ್ರಮ ಹಾಗೂ ರಸ ಮಂಜರಿ ಕಾರ್ಯಕ್ರಮ ಹಬ್ಬದ ನಂತರದ ದಿನದಂದು ಮನರಂಜನೆ ನೀಡುತ್ತದೆ ಎಂದು ಶಾಸಕ ಸತ್ಯನಾರಾಯಣ್ ಹೇಳಿದರು.
ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ತಾ|| ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ನಗರಸಭಾ ಸದಸ್ಯರಾದ ಆಂಜಿನಪ್ಪ, ಡಿ.ಮಂಜುನಾಥ್, ಜಾಫರ್, ನಗರಸಭೆಯ ಮಾಜಿ ಸದಸ್ಯ ಆರ್.ರಾಘವೇಂದ್ರ, ಆರ್.ರಾಮು, ಹುಳಿಗೆರೆ ಮೂಡಲಗಿರಿಯಪ್ಪ ಶಿರಾ ರವಿ, ಬಿ.ಆರ್.ನಾಗಭೂಷಣ್, ನಟರಾಜ್, ಕೇಬಲ್ ಕಾಂತರಾಜು, ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ