ದಾವಣಗೆರೆ:
ಹುತಾತ್ಮ ಪೊಲೀಸರ ಕುಟುಂಬಳಿಗೂ ಭಾರತೀಯ ಯೋಧರಿಗೆ ಸಿಗುವ ಸೌಲಭ್ಯಗಳು ಸಿಗುವಂತಾಗಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆಶಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ, ಹುತಾತ್ಮ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಭಾರತೀಯ ಸೈನಿಕರು ಹುತಾತ್ಮರಾದರೆ, ಹುತಾತ್ಮ ಸೈನಿಕ ಕುಟುಂಬಗಳಿಗೆ ವಸತಿ, ಆರೋಗ್ಯ, ವಿದ್ಯಾಭ್ಯಾಸ ಸೇರಿದಂತೆ ಹಲವು ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕಲ್ಪಿಸುತ್ತಿದೆ. ಸೈನಿಕರಂತೆ ಪೊಲೀಸರು ಸಹ ಹಗಲು ರಾತ್ರಿ ಸ್ವಸ್ಥ ಸಮಾಜಕ್ಕಾಗಿ ಶ್ರಮಿಸುತ್ತಿರುತ್ತಾರೆ. ಹೀಗಾಗಿ ಕರ್ನಾಟಕ ಸರ್ಕಾರವು ಸಹ ಹುತಾತ್ಮ ಪೊಲೀಸ್ ಕುಟುಂಬಳಿಗೆ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನೆರವಾಗಬೇಕಿದೆ ಎಂದರು.
ಹುತಾತ್ಮ ಪೊಲೀಸ್ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ದಾನಿಗಳು, ಪೊಲೀಸ್ ಇಲಾಖೆ ಸ್ವಯಂ ಸೇವಾ ಸಂಘಟನೆಗಳನ್ನು ಒಗ್ಗೂಡಿಸಿ, ಒಂದು ಸಾಂಸ್ಥಿಕ ರೂಪ ನೀಡಿ ಆ ಮೂಲಕ ದೇಣಿಗೆ ಸಂಗ್ರಹಿಸಿ ಹುತಾತ್ಮ ಪೊಲೀಸ್ ಕುಟುಂಬಳಿಗೆ ಯೋಧರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಗಡಿಯಲ್ಲಿ ಸೈನಿಕರು ಹೊರಗಿನ ಶತೃಗಳಿಂದ ದೇಶವನ್ನು ರಕ್ಷಣೆ ಮಾಡಿದರೆ, ಪೊಲೀಸರು ರಾಜ್ಯದ ಶಾಂತಿ ಸುವ್ಯವಸ್ಥೆಗಾಗಿ ಹಗಲು-ರಾತ್ರಿ ಎನ್ನದೇ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪೊಲೀಸರ ರಕ್ಷಣೆಗೆ ಅಗತ್ಯ ಪರಿಕರಗಳ ಕೊರತೆ ಸಹ ಇದೆ. ಅಲ್ಲದೆ, ಪ್ರತಿನಿತ್ಯ ಒತ್ತಡದಲ್ಲಿ ಜೀವನ ನಡೆಸುತ್ತಾರೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯದಲ್ಲಿ ಗುಂಪು ಘರ್ಷಣೆ, ಉಗ್ರ ಚಟುವಟಿಕೆಗಳು ಕಡಿಮೆ. ಅದರೂ ಮೊದಲಿಗಿಂತಲೂ ಈಗ ಪೊಲೀಸರ ಎದುರು ಹೆಚ್ಚಿನ ಸವಾಲುಗಳಿವೆ ಎಂದರು.
ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ವಲಯಗಳು ಸೇರಿದಂತೆ ಪೊಲೀಸರು ಎಲ್ಲಾ ರಂಗಗಳಲ್ಲೂ ಶಾಂತಿ ಕಾಪಾಡುತ್ತಿದ್ದಾರೆ. ಇತರೆ ಇಲಾಖೆಗಳಿಗೆ ಹೋಲಿಸಿದರೆ, ಪೊಲೀಸರಿಗೆ ಕಾರ್ಯದೊತ್ತಡ ಹೆಚ್ಚಿರುವ ಕಾರಣ ಅನೇಕರು ರಕ್ತದೊತ್ತಡ, ಡಯಾಬಿಟಿಸ್ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಪೊಲೀಸರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಡಿವೈಎಸ್‍ಪಿ, ಪಿಎಸ್‍ಐ ಸೇರಿದಂತೆ ರಾಜ್ಯದ 15 ಪೊಲೀಸರು, ದೇಶದಲ್ಲಿ 414 ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ದೇಶದ ಜನರು ನೆಮ್ಮದಿಯಿಂದ ಇದ್ದಾರೆ ಎಂದರೆ, ಅದಕ್ಕೆ ಪೊಲೀಸರ ಕಾರ್ಯದಕ್ಷತೆಯೇ ಮುಖ್ಯ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, 1951ರ ಅಕ್ಟೋರ್ 21ರಂದು ಲಡಾಖ್‍ನ ಗಡಿಯಲ್ಲಿ ಚೀನಾ ದೇಶದ ಸೈನಿಕರು ನಮ್ಮ ದೇಶದ ಸೈನಿಕರ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ಸಿಆರ್‍ಪಿಎಫ್ ಸೈನಿಕರು ವೀರಾವೇಶದಿಂದ ಹೋರಾಡಿ ಹುತಾತ್ಮರಾಗುತ್ತಾರೆ. ಅವರ ಸೇವೆ ಹಾಗೂ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷವೂ ಪೊಲೀಸ್ ಹುತಾತ್ಮದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ 2 ನಿಮಿಷಗಳ ಮೌನ ಆಚರಿಸುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸಲಾಯಿತು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್, ನಿವೃತ್ತ ಪೊಲೀಸರು, ಪೊಲೀಸ್ ಕುಟುಂಬಗಳ ಸದಸ್ಯರು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
