ಶ್ರೀಸಾಯಿಬಾಬಾ ಮೂರ್ತಿಯ ಭವ್ಯ ಮೆರವಣಿಗೆ

ದಾವಣಗೆರೆ:

       ಎಂಸಿಸಿ ಎ ಬ್ಲಾಕ್ 8ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಶ್ರೀ ಸಾಯಿ ಟ್ರಸ್ಟ್ ವತಿಯಿಂದ ಶ್ರೀ ಶಿರಡಿ ಸಾಯಿ ಬಾಬಾರವರ 100ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಇಂದು ಬಾಬಾರವರ ಮೂರ್ತಿಯ ಮೆರವಣಿಗೆ ವೈಭವದಿಂದ ಸಾಗಿತು.

          ಬೆಳ್ಳಿ ರಥ ಮತ್ತು ಟ್ರ್ಯಾಕ್ಟರ್‍ನಲ್ಲಿ ಬಾಬಾರವರ ಬೃಹತ್ ಮತ್ತು ಚಿಕ್ಕ ಮೂರ್ತಿಗಳನ್ನು ವಿಶೇಷವಾಗಿ ಸಕಲ ಅಲಂಕಾರದೊಂದಿಗೆ ಹಾಗೂ ಟ್ರ್ಯಾಕ್ಟರ್‍ಗಳಲ್ಲಿ ಸಾಯಿ ಬಾಬಾರವರ ಮತ್ತು ಬಾಬಾ ಮಂದಿರ ಸಂಸ್ಥಾಪಕ ರೇವಣಸಿದ್ದಪ್ಪ ಅವರ ಭಾವಚಿತ್ರಗಳ ಸಹಿತ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಭವ್ಯವಾಗಿ ಸಾಗಿತು.

          ಮಂದಿರದ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಗುಂಡಿ ವೃತ್ತ, ರಾಮ್ ಅಂಡ್ ಕೋ ವೃತ್ತ, ಎವಿಕೆ ಕಾಲೇಜು ರಸ್ತೆ, ಅರುಣಾ ಚಿತ್ರಮಂದಿರ ರಸ್ತೆ, ವಿನೋಬನಗರ ಸೇರಿದಂತೆ ರಾಜ ಬೀದಿಗಳಲ್ಲಿ ಭಕ್ತರಿಗೆ ದರ್ಶನ ನೀಡುತ್ತಾ ಸಂಚರಿಸಿತು. ಬಾಬಾರವರ ದರ್ಶನ ಪಡೆದ ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರಲ್ಲದೇ, ತಮ್ಮ ಮೊಬೈಲ್‍ಗಳಲ್ಲಿ ಸೆರೆ ಹಿಡಿದಿದ್ದು ಸಾಮಾನ್ಯವಾಗಿತ್ತು. ಮೆರವಣಿಗೆಯು ಪುನಹ ಆರಂಭಿಕ ಸ್ಥಳವಾದ ಬಾಬಾರವರ ಮಂದಿರದ ಬಳಿ ಆಗಮಿಸಿತು.

         ಕೇರಳದ ದಂಡಿ ಕುಣಿತ ಮತ್ತು ಚೆಂಡೆ ವಾದ್ಯ, ಡೊಳ್ಳು, ನಾಸಿಕ್, ಡ್ರಮ್, ಸಮಾಳ, ನಾಗಸ್ವರ ಮುಂತಾದ ವಾದ್ಯ ಗೋಷ್ಠಿಗಳು ಸೇರಿದಂತೆ ಬೊಂಬೆಗಳು ಹಾಗೂ ಮಹಿಳಾ ಸೇವಾ ಕರ್ತರ ಪಂಡ್ರೆ ಭಜನೆ ಮೆರವಣಿಗೆಯ ಕಳೆ ಹೆಚ್ಚಿಸಿದವು.

          ಮೆರವಣಿಗೆ ವೇಳೆ ಶ್ರೀ ಸಾಯಿ ಟ್ರಸ್ಟ್‍ನ ಕಾರ್ಯದರ್ಶಿ ಎಂ. ಶಿವಪ್ಪ, ಟ್ರಸ್ಟಿಗಳಾದ ಡಾ. ಜಾಧವ್, ಪರಶುರಾಮ್, ನಟಟರಾಜ್, ಜಿತೇಂದ್ರ ಬೇತೂರು, ಸಾಯಿ ಬಾಬಾ ಸೇವಾ ಕರ್ತರಾದ ಮಧುಸೂಧನ್, ಶಾಮನೂರು ವಿರೂಪಾಕ್ಷಪ್ಪ, ಅರ್ಚಕರಾದ ರಾಜು ಸ್ವಾಮಿ, ಸಾಯಿ ದೀಪು ಸೇರಿದಂತೆ ಸಾಯಿ ಸೇವಾಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link