ಬೆಂಗಳೂರು,
ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಹಿಂದೆ ಕೂರಿಸಿಕೊಂಡು ಆಸ್ಪತ್ರೆಗೆ ಬೈಕಿನಲ್ಲಿ ಹೋಗುತ್ತಿದ್ದ ತಂದೆಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದುತಂದೆ, ಮಗ ಇಬ್ಬರೂ ಮೃತಪಟ್ಟಿರುವ ಧಾರುಣ ಘಟನೆ ಹಳೆಮದ್ರಾಸ್ ರಸ್ತೆಯ ಆವಲಹಳ್ಳಿ ಸೇತುವೆ ಬಳಿ ನಡೆದಿದೆ..

ಕೆ.ಆರ್.ಪುರಂ ದೇವಸಂದ್ರ ನಿವಾಸಿ ಬ್ರಹ್ಮಾನಂದ ರೆಡ್ಡಿ(43) ಹಾಗೂ ಅವರ ಪುತ್ರ ಮೌನತಾಯಿ ರೆಡ್ಡಿ (12) ಎಂದು ಮೃತರನ್ನು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಸೋಮವಾರ ಬೆಳಿಗ್ಗೆ 10.30ರ ವೇಳೆ ತಂದೆ ಬ್ರಹ್ಮಾನಂದರೆಡ್ಡಿ ಅವರು ಬೈಕ್ನಲ್ಲಿ ಹಿಂದೆ ಕೂರಿಸಿಕೊಂಡು ಕೆ.ಆರ್.ಪುರಂನಿಂದ ಹೊಸಕೋಟೆಗೆ ತೆರಳುತ್ತಿದ್ದರು.
ಮಾರ್ಗಮಧ್ಯೆ ಅವಲಹಳ್ಳಿ ಫ್ಲೈ ಓವರ್ ಮೇಲೆ ವೇಗವಾಗಿ ಬಂದ ಕಾರು ಬ್ರಹ್ಮಾನಂದ ರೆಡ್ಡಿ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗನ ದೇಹ ಫ್ಲೈ ಓವರ್ ತಡೆಗೋಡೆಗೆ ಬಡಿದು ಎರಡು ತುಂಡಾಗಿದ್ದು, ಬ್ರಹ್ಮಾರೆಡ್ಡಿ ಸಹ ರಸ್ತೆ ಮೇಲೆ ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಂತರ ಕಾರು ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಅವಲಹಳ್ಳಿ ಪೊಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








