ಬರಗೂರು:
ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ನಾನು ಗಮನಿಸಿದ್ದು, ನನ್ನ ಸ್ವಂತ ಖರ್ಚಿನಿಂದಾದರೂ ಹೊಸದಾಗಿ ಕೊರೆಸಿರುವ ಕೊಳವೇ ಬಾವಿಗೆ ಪಂಪು,ಮೋಟರ್ ಜೋಡಿಸಿ ಮೂರುದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಹಂಸವೇಣಿಶ್ರೀನಿವಾಸ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಶಿರಾ ತಾಲೂಕು ಬರಗೂರಿನ ಹೊಸಬಡಾವಣೆ ಹಾಗೂ ಗೋಪಿಕುಂಟೆ ರಸ್ತೆ ಅಕ್ಕಪಕ್ಕದಲ್ಲಿನ ಜನರು ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿ ಮುಂದೆ ಧರಣಿ ನಡೆಸಿ ಪ್ರತಿಭಟಿಸಿದ ವೇಳೆ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕು ಪಂಚಾಯ್ತಿಯಿಂದ ಯಾವುದೇ ಅನುದಾನಗಳು ಲಭ್ಯವಿಲ್ಲ. ನನ್ನ ಗ್ರಾಮದಲ್ಲೇ ನೀರಿನ ಸಮಸ್ಯೆ ಇರುವುದನ್ನು ಗಮನಿಸಿದರೆ ನೀರಿನ ಸಮಸ್ಯೆ ಬಗೆಹರಿಸುವುದು ನನ್ನ ಕರ್ತವ್ಯವಾಗಿದೆ. ಈಗಾಗಲೇ ಬರಗೂರಿನ ಕೆರೆಯಲ್ಲಿ ಶಾಸಕ ಬಿ.ಸತ್ಯನಾರಾಯಣರ ಒತ್ತಾಯದ ಮೇರೆಗೆ ಕೊಳವೆಬಾವಿ ಕೊರೆಸಲಾಗಿದೆ. ನಮ್ಮ ತಾ.ಪಂಚಾಯ್ತಿಯಲ್ಲಿ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ ಅದಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ಪಂಪು, ಮೋಟರ್ ಅಳವಡಿಸಿ ಜನರಿಗೆ ನೀರು ಒದಗಿಸಲು ಮುಂದಾಗಿದ್ದೇನೆ ಎಂದರು.
ಕಳೆದ ಇಪ್ಪತ್ತು ದಿನಗಳಿಂದ ಬರಗೂರಿನ ಹೊಸ ಬಡಾವಣೆ ಹಾಗೂ ಕಾಲೋನಿಯಲ್ಲಿ ಕುಡಿಯುವ ನೀರೀನ ಸಮಸ್ಯೆ ನಿವರಿಸುವಂತೆ ಆ ಭಾಗದ ನಾಗರಿಕರು ಇಂದು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಇದೇವೇಳೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿನರಸಮ್ಮ ಹಾಗೂ ಪಿಡಿಓ ಅನಿತಾರವರಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಹೊಸಬಡಾವಣೆಯ ಜನರು ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕ ಬಿ.ಮರಿಯಪ್ಪ, ವೆಲ್ಡಿಂಗ್ ಷಾಪ್ ನ ಹನುಮಂತರಾಯಪ್ಪ, ಪ್ರಸನ್ನ ರಾವ್, ಗಂಗಾಧರ್, ರೇಣುಕಪ್ರಸಾದ್ ನಾರಾಯಣಪ್ಪ,ರಹಮತ್ ಉಲ್ಲಾ, ಮುನಾವರ್ ಪಾಷ, ತಾ.ಪಂ.ಸಹಾಯಕ ನಿರ್ದೇಶಕ ನಾಗೇಂದ್ರ,.ಗ್ರಾಮಪಂಚಾಯ್ತಿ ಸದಸ್ಯ ಎಲ್.ಹನುಮಂತರಾಯಪ್ಪ,ಚಂದ್ರವತಿ ಈರಮಲ್ಲಪ್ಪ ರಂಗನಾಥ್,ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ