ದಾವಣಗೆರೆ:
ಮಹಾನಗರ ಪಾಲಿಕೆ ವ್ಯಾಪ್ತಿಯ ಅವ್ಯವಸ್ಥೆಯನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಲಯದ ಕಾರ್ಯಕರ್ತರು ನಗರದಲ್ಲಿ ಸೋಮವಾರ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಬಟನಾಕಾರರು, ಪಿಬಿ ರಸ್ತೆಯ ಮೂಲಕ ಪಾಲಿಕೆಗೆ ತೆರಳಿ ಮುತ್ತಿಗೆ ಹಾಕಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸ್ಮಾರ್ಟ್‍ಸಿಟಿ ಯೋಜನೆಗೆ ದಾವಣಗೆರೆ ನಗರ ಆಯ್ಕೆಯಾಗಿ ವರ್ಷಗಳೇ ಕಳೆದಿವೆ. ಆದರೆ, ಸ್ವಚ್ಛತೆ ಮರೀಚಿಕೆಯಾಗಿದೆ. ನಗರದ ಕೆಲವೆಡೆ ಬಿಡಾಡಿ ಹಂದಿ, ನಾಯಿಗಳ ಕಾಟ ಹೆಚ್ಚಾಗಿದೆ. ಇವುಗಳಿಂದ ಸೈಕಲ್, ದ್ವಿಚಕ್ರ ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಹಂದಿ, ನಾಯಿ ಏಕಾಏಕಿ ರಸ್ತೆಗೆ ಅಡ್ಡ ಬರುವುದರಿಂದ ಬೈಕ್ ಮತ್ತು ಸೈಕಲ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹಣೆ ಸಾಕಷ್ಟಿವೆ. ಅಲ್ಲದೇ, ಪಾದಾಚಾರಿಗಳು, ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸುತ್ತಿವೆ. ಕೊಚ್ಚೆಯಲ್ಲಿ ಹೊರಳಾಡುತ್ತಾ ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗಿದೆ. ಆದರೆ, ಇವುಗಳಿಗೆ ಕಡಿವಾಣ ಹಾಕಲು ಪಾಲಿಕೆ ಮುಂದಾಗದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಳೆ ಬಂದರೆ ಸಾಕು ರಾಜಕಾಲುವೆಗಳು ತುಂಬಿ ರಸ್ತೆ, ಮನೆಗಳಿಗೆಲ್ಲಾ ಮಳೆ ನೀರು ನುಗ್ಗುತ್ತಿದೆ. ಹಳೇ ಭಾಗಗಳಾದ ಅಜಾದ್ ನಗರ, ಭಾಷನಗರ, ಅಹ್ಮದ್ ನಗರ ಸೇರಿದಂತೆ ಅನೇಕ ಪ್ರದೇಶಗಳು ಮಳೆ ಬಂದಾಗಲೆಲ್ಲಾ ಜಲಾವೃತ್ತವಾಗುತ್ತಿವೆ. ನಗರದ ದಕ್ಷಿಣ ವಲಯದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು ಇನ್ನು ರಿಪೇರಿಯಾಗಿಲ್ಲ. ಆದ್ದರಿಂದ ತಕ್ಷಣವೇ ಪಾಲಿಕೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ನಾಗರೀಕರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಕರವೇ ಮುಖಂಡರಾದ ಸಿಕಂದರ್ ಹಜರತ್, ಕೆ.ಹೆಚ್. ಮಹಬೂಬ್, ಮಂಜು ಗಂಗೂರ್, ಸಂತೋಷ ದೊಡ್ಮನಿ, ಎಸ್.ಶ್ರೇಯಸ್, ಅಮ್ಜದ್ ಅಲಿ, ಶಫೀವುಲ್ಲಾ, ಅಜೀಂ, ಖಲೀಲ್, ಹನೀಫ್, ಜಬೀರ್, ಅಲ್ಲಾವುದ್ದೀನ್, ಮಹಬೂಬ್ ಅಲಿ, ಇಮ್ರಾನ್, ಖಲಂದರ್, ಮುನ್ನೀರ್, ಇರ್ಫಾನ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
