ಭಿಕ್ಷಾಟನೆ ಬಿಡಿ ಸ್ವಾವಲಂಬಿಗಳಾಗಿ ಬದುಕಿ

ದಾವಣಗೆರೆ:

      ವಿಕಲಚೇತನರು ತಾವು ಅಶಕ್ತರು ಎಂಬುದಾಗಿ ಭಾವಿಸಿ ಭಿಕ್ಷಾಟನೆ ಮಾಡುವುದನ್ನು ಬಿಟ್ಟು, ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಕರೆ ನೀಡಿದರು.

       ನಗರದ ಎವಿಕೆ ರಸ್ತೆಯಲ್ಲಿರುವ ರಂಗಮಹಲ್‍ನಲ್ಲಿ ಶನಿವಾರ ಸ್ನೇಹಸ್ಪೂರ್ತಿ ಯುವಕರ ಕಲಾ ತಂಡದ ವತಿಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ದೃಷ್ಠಿ ವಿಶೇಷ ಚೇತನರ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ವಿಕಲಚೇತನರು ತಾವು ಅಶಕ್ತರು ತಮಗೆ ಸಮಾಜದಲ್ಲಿ ಅವಕಾಶಗಳೇ ಇಲ್ಲ ಎಂಬ ಕೀಳರಿಮೆಯಿಂದ ಭಿಕ್ಷಾಟನೆ ಮಾಡಿ ಬದುಕುವುದಕ್ಕಿಂತ ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ನಮ್ಮ ಬ್ಯಾಚ್‍ನಲ್ಲಿಯೇ ಅಂಧರೊಬ್ಬರು ಐಪಿಎಸ್ ತೇರ್ಗಡೆಯಾಗಿ ಉನ್ನತ ಅಧಿಕಾರಿಯಾಗಿದ್ದಾರೆ. ಹೀಗೆ ವಿಕಲಚೇತನರು ಸಾಧನೆ ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದ್ದು, ಅವುಗಳಿಂದ ಪ್ರೇರಣೆ ಪಡೆದು ನೀವೂ, ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಹೊರ ತರುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

       ಸಮಾಜ ಅಂಧರಿಗೆ ಅನುಕಂಪ ತೋರಿಸುವ ಬದಲು, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು. ಅಂಧರಲ್ಲಿ ಅನೇಕ ವಿಶೇಷ ಗುಣಗಳುಳ್ಳ ಪ್ರತಿಭಾವಂತರಿದ್ದಾರೆ. ಅತ್ಯುತ್ತಮ ಹಾಡುಗಾರರು, ಅಗಾಧ ಜ್ಞಾಪಕಶಕ್ತಿಯುಳ್ಳವರು ಅನೇಕರಿದ್ದಾರೆ. ಆದ್ದರಿಂದ ನೀವು ವಿಕಲಚೇತನರುರೆಂದು ಕೀಳರಿಮೆ ಬೆಳೆಸಿಕೊಂಡು ಮಾನಸಿಕವಾಗಿ ಕುಗ್ಗದೇ, ಆತ್ಮವಿಶ್ವಾಸದಿಂದ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದು ಕಿವಿಮಾತು ಹೇಳಿದರು.

     ಸಮಾಜದಲ್ಲಿ ವಿಕಲಚೇತನರಿಗೆ ನಿತ್ಯವೂ ಸಂಕಷ್ಟ, ತೊಂದರೆ ತಪ್ಪಿದ್ದಲ್ಲ. ಅದರಲ್ಲೂ ದೃಷ್ಠಿವಿಕಲಚೇತನರಿಗೆ ಹೆಚ್ಚಿನ ತೊಂದರೆ. ಈ ಸಂದರ್ಭ ದೃಷ್ಟಿವಿಕಲರಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಸ್ನೇಹಸ್ಪೂರ್ತಿ ತಂಡ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.

      ಅಂಧರ ವಲ್ರ್ಡ್‍ಕಪ್ ಕ್ರಿಕೇಟ್‍ನಲ್ಲಿ ಭಾರತದ ಅಂಧಕ್ರೀಡಾಪಟುಗಳು ಕಳೆದ ಮೂರು ವರ್ಷದಿಂದ ವಿಶ್ವಕಪ್ ಗೆಲ್ಲುತ್ತಿರುವುದೇ ಹೆಮ್ಮೆಯ ಸಂಗತಿಯಾಗಿದೆ ಭಾರತದ ಟೀಮ್‍ನಲ್ಲಿ 6 ಜನ ಕರ್ನಾಟಕದವರಿದ್ದು, ಅದರಲ್ಲಿ ಹರಪನಹಳ್ಳಿಯ ಅಂಧಕ್ರೀಡಾಪಟು ಒಬ್ಬರಿರುವುದು ಸಂತೋಷದ ವಿಷಯ ಎಂದರು.

       ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆ.ಎಚ್.ವಿಜಯಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಗಳ ಅನುದಾನಗಳಲ್ಲಿ ಶೇ.5ರಷ್ಟು ತಪ್ಪದೇ ನೀಡಿದರೆ, ಮುಂದಿನ 2 ವರ್ಷಗಳಲ್ಲಿ ಎಲ್ಲಾ ವಿಕಲಚೇತನರಿಗೆ ಸಿಗಬೇಕಾದ ಅಷ್ಟೂ ಸೌಲಭ್ಯ ನೀಡಬಹುದು. ಆದರೆ, ಅನೇಕ ಇಲಾಖೆಗಳು ನೀಡುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

       ವಿಕಲಚೇತನರೆಲ್ಲರೂ ನಮ್ಮ ಮಕ್ಕಳಿದ್ದಂತೆ, ನಿಮಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ತರಿಸಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು, ಎಲ್ಲಾ ಅಂಧರು ಬ್ರೈನ್ ವಾಚ್ ಹಾಗೂ ಎಸ್ಸೆಸ್ಸೆಲ್ಸಿ ಪೂರೈಸಿದವರು ಲ್ಯಾಪ್‍ಟಾಪ್‍ಗೆ ಅರ್ಜಿ ಹಾಕಿದರೆ ಶೀಘ್ರ ಸರ್ಕಾರದಿಂದ ತರಿಸಿಕೊಡುತ್ತೇನೆ. ಈಗಾಗಲೇ ಅರ್ಜಿ ಹಾಕಿದ 14 ಅಂಧರಿಗೆ ಲ್ಯಾಪ್‍ಟಾಪ್ ತರಿಸಲಾಗಿದ್ದು, ಮುಂದಿನ ವಿಶ್ವ ಅಂಗವಿಕಲರ ದಿನಾಚರಣೆಯಂದು ವಿತರಿಸಲಾಗುವುದು ಎಂದು ಹೇಳಿದರು.

       ದಾವಣಗೆರೆ, ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ದೃಷ್ಠಿಹೀನ ವಿಶೇಷ ಚೇತನರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

      ಬೆಂಗಳೂರು ಕೆನೆರಾ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಅಂಗವಿಕಲರ ಇಲಾಖೆ ಅಧಿಕಾರಿ ಶಶಿಧರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ತಂಡದ ಪ್ರಧಾನ ಕಾರ್ಯದರ್ಶಿ ಎಂ. ವಿರೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link