ಜಕಾರ್ತಾ:
ಪಾಂಗ್‌ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ‘ಲಯನ್ ಏರ್’ ವಿಮಾನ ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಸಮುದ್ರಕ್ಕೆ ಪತನಗೊಂಡಿದೆ ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿ ಖಚಿತಪಡಿಸಿದೆ. ನುರಿತ ಈಜುಗಾರರು ಮತ್ತು ಸ್ಕೂಬಾ ಡೈವರ್‍ಗಳು ಸಮುದ್ರದಾಳಕ್ಕೆ ಇಳಿದು ವಿಮಾನದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಮಹಮದ್ ಸೌಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಕಾರ್ತದಿಂದ ಹೊರಟ 13 ನಿಮಿಷಗಳ ಬಳಿಕ ವಿಮಾನ ಸಂಪರ್ಕ ಕಡಿದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 7.30ರ ವೇಳೆಗೆ ಸುಮಾತ್ರಾದ ದ್ವೀಪದಲ್ಲಿ ಇಳಿಯಬೇಕಿದ್ದ ವಿಮಾನ ಸಮುದ್ರಕ್ಕೆ ಪತನಗೊಂಡಿರುವ ಶಂಕೆಯಿದೆ ಎಂದು ಬೆಳಿಗ್ಗೆ ಅಧಿಕಾರಿಗಳು ತಿಳಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಇಂಡೋನೇಷ್ಯಾದ ರಕ್ಷಣಾ ಮತ್ತು ಶೋಧ ಸಂಸ್ಥೆಯ ವಕ್ತಾರ ಯೂಸುಫ್ ಲತಿಫ್ ವಿಮಾನ ಪತನವಾಗಿರುವ ಮಾಹಿತಿಯನ್ನು ಖಚಿತ ಪಡಿಸಿದ್ದು, ವಿಮಾನದಲ್ಲಿ 189 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯಿದೆ.
ಟೇಕ್ ಆಫ್ ಆದ 13 ನಿಮಿಷದಲ್ಲಿ ವಿಮಾನ ನಾಪತ್ತೆಯಾಗಿದ್ದು, ವಿಮಾನ ಬೀಳುತ್ತಿರುವ ದೃಶ್ಯವನ್ನು ಜಕಾರ್ತ ಬಂದರಿನಿಂದ ಹೊರಟಿದ್ದ ಬೋಟ್ ಸಿಬ್ಬಂದಿ ನೋಡಿದ್ದಾರೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದಲ್ಲಿ ಬಹುತೇಕ ಮಂದಿ ಸಾವಿಗೀಡಾಗಿರುವ ಆತಂಕವಿದ್ದು, ಬದುಕುಳಿದಿರುವವರಿಗಾಗಿ ತೀವ್ರ ಶೋಧ ಮುಂದುವರಿದಿದೆ. ಪತನಗೊಂಡ ವಿಮಾನದ ಅವಶೇಷಗಳು, ಪ್ರಯಾಣಿಕರ ಸ್ಮಾರ್ಟ್ ಫೋನ್‍ಗಳು, ಪುಸ್ತಕಗಳು, ಚೀಲಗಳು ಚೆಲ್ಲಾಪ್ಪಿಲ್ಲಿಯಾಗಿ ಬಿದ್ದಿರುವ ಫೋಟೋಗಳನ್ನು ಇಂಡೋನೆಷ್ಯಾದ ವಿಪತ್ತು ಸಂಸ್ಥೆ ಪೋಸ್ಟ್ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ