ಬೆಂಗಳೂರು
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಆದ್ಯತೆ ನೀಡಿದ್ದು, ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ ಪಕ್ಷ 5 ರಿಂದ 6 ಗ್ರಾಮ ಪಂಚಾಯತ್‍ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ನಗರದಲ್ಲಿಂದು ಅಯೋಜಿಸಲಾಗಿದ್ದ ವಿಡಿಯೋ ಕಾನ್ಪರೆನ್ಸ್ ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಂವಾದ ನಡೆಸಿದ ಅವರು, ಈ ಸಂಬಂದ ನವಂಬರ್ ಅಂತ್ಯದೊಳಗೆ ಯೋಜನಾ ರೂಪುರೇಷೆಗಳನ್ನು ಸಿದ್ದ ಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಕೇವಲ ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಿದರೆ ಸಾಲದು. ಇದು ಗ್ರಾಮೀಣ ಪ್ರದೇಶದಲ್ಲಿ ಕೂಡ ಆಗಬೇಕು.
ಆ ದಿಸೆಯಲ್ಲಿ ಹಂತ ಹಂತವಾಗಿ ಆಯ್ದ ಗ್ರಾಮ ಪಂಚಾಯತ್ ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಅಗತ್ಯ ಯೋಜನೆ ಸಿದ್ದ ಪಡಿಸಿ ಅನುಷ್ಠಾನಗೊಳಿಸಬೇಕೆಂದು ಅವರು ಸೂಚಿಸಿದರು.
ಈ ಯೋಜನೆಗೆ ಅಗತ್ಯವೆನಿಸಿದಲ್ಲಿ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ, ಸಮುದಾಯ ಮುಖ್ಯಸ್ಥರು ಹಾಗೂ ಆಸಕ್ತ ಲಾಭ ರಹಿತ ಸಂಘ ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬಹುದು. ಈ ಸಂಬಂದ ನವಂಬರ್ ತಿಂಗಳ ಅಂತ್ಯದೊಳಗೆ ಅಗತ್ಯ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.
ನವಂಬರ್ 1 ರಂದು ರಾಜ್ಯವನ್ನು ಬಹಿರ್ದೆಸೆ ಬಯಲು ಮುಕ್ತ ಶೌಚಾಲಯ ರಾಜ್ಯ ಎಂದು ಘೋಸಿಸುವ ದಿಸೆಯಲ್ಲಿ ಶೌಚಾಲಯಗಳ ನಿರ್ಮಾಣ ಪ್ರಗತಿ ಬಗ್ಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ವಿಶೇಷವಾಗಿ ಚರ್ಚಿಸಿದ ಸಚಿವರು ಈ ದಿಸೆಯಲ್ಲಿ ನಿಗದಿತ ಗುರಿ ಮುಟ್ಟಿದ ಸಿ.ಇ.ಓ ಗಳಿಗೆ ಅಭಿನಂದನೆ ಸಲ್ಲಿಸಿದರು.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಚ್ಚುವರಿ ಶೌಚಾಲಯಗಳ ನಿರ್ಮಾಣಕ್ಕೆ ಬೇಡಿಕೆ ಬಂದಲ್ಲಿ ಅದನ್ನು ಪರಿಗಣಿಸಬಹುದು, ಕೇಂದ್ರ ಸರ್ಕಾರ ಸಹ ಹೆಚ್ಚುವರಿ ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಬೇಡಿಕೆ ಇರುವ ಜಿಲ್ಲೆಗಳಲ್ಲಿ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ ಕೈಗೊಳ್ಳಬಹುದು ಎಂದು ಸಚಿವರು ತಿಳಿಸಿದರು.
ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡದ ಜಿಲ್ಲೆಗಳ ಸಿ.ಇ.ಓ ಗಳಿಗೆ ಖಡಕ್ ಎಚ್ಚರಿಕೆ ನೀಡಿದರಲ್ಲದೇ, ನಿಗದಿತ ಗುರಿಯ ಅನ್ವಯ ನರೇಗಾ ಯೋಜನೆಯ ಪ್ರಗತಿ ಆಗದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಯೋಜನೆಯಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಬೆಳೆ ಬೆಳೆಯಲು ಹೆಚ್ಚಿನ ಒತ್ತು ಕೊಡಬೇಕು ಜೊತೆಗೆ ಪಶುಪಾಲನಾ ಶೆಡ್ ಗಳನ್ನು ನಿರ್ಮಿಸಲು ಗಮನ ಕೊಡಬೇಕೆಂದು ಹೇಳಿದರು. ಮುಖ್ಯವಾಗಿ ಎಲ್ಲಾ ಸರ್ಕಾರಿ ಕಛೇರಿಗಳ ಅವರಣದಲ್ಲಿ ಗಿಡಗಳನ್ನು ನೆಡಬೇಕು. ಇದಕ್ಕೆ ಎಲ್ಲಾ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಬೇಕು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
