ಕುಣಿಗಲ್
ಜಗತ್ತಿನಲ್ಲಿ ಇರುವ ದೇವರೆಲ್ಲವೂ ಲಿಂಗದಲ್ಲಿ ಲೀನವಾಗಿದೆ. ಭೂಮಿಯ ಆಕಾರದಂತೆ ಕಾಣುವ ಶಿವಲಿಂಗದಲ್ಲಿ ಭಗವಂತನ ಸಾಕ್ಷಾತ್ಕಾರವಾಗಿದೆ. ಅಂಗೈಯಲ್ಲಿ ಇರುವ ಲಿಂಗದಲ್ಲಿ ಏಕಾಗ್ರತೆಯಿಂದ ಪೂಜೆ ಸಲ್ಲಿಸುವಾಗ ಉಂಟಾಗುವ ದೈವಿಕ ತರಂಗದಿಂದ ಸಕಲ ಭಾಗ್ಯಗಳು ಲಭಿಸಲಿದೆ. ದೇಹದ ಮೇಲೆ ಲಿಂಗವಿದ್ದರೆ ಸಕಲ ಕಷ್ಟಗಳು ದೂರಾಗಲಿವೆ ಎಂದು ಸಿದ್ದಗಂಗಾ ಮಠದ ಕಿರಿಯಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ತತ್ವ ಚಿಂತನಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ನಿರ್ಮಲ ಮನಸ್ಸು ಮಲಿನವಾದಾಗ ಮಠ ಮತ್ತು ಗುರುವಿನ ಸಂಪರ್ಕದಿಂದ ಅದನ್ನು ಶುದ್ದೀಕರಿಸಬಹುದು, ಯಾವ ವ್ಯಕ್ತಿ ತನ್ನ ದೇಹದ ಮೇಲೆ ಲಿಂಗ ಧರಿಸುತ್ತಾನೆ ಅವನಿಗೆ ಒಳಿತಾಗಲಿದೆ ಎಂದರು. ಹಲವಾರು ಮಂದಿ ತಮ್ಮ ಹುಟ್ಟು ಹಬ್ಬವನ್ನು ಹಲವಾರು ರೀತಿ ಆಚರಿಸಿಕೊಳ್ಳುತ್ತಾರೆ. ಆದರೆ ಆಲ್ಕೆರೆ ಮಠದ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ತಮ್ಮ ಹುಟ್ಟು ಹಬ್ಬವನ್ನು ಧಾರ್ಮಿಕ ಚಿಂತನ-ಮಂಥನ ಕಾರ್ಯಕ್ರಮ ಏರ್ಪಡಿಸಿ ಮಠದ ಭಕ್ತರನ್ನು ಒಂದೆಡೆಗೆ ಸೇರಿಸಿ ಆಧ್ಯಾತ್ಮದ ಸಂದೇಶ ಕೊಡಿಸುತ್ತಿದ್ದಾರೆ. ಇಂತಹ ಸ್ವಾಮೀಜಿಗಳು ತಮ್ಮ ಪರಿಶ್ರಮದಿಂದ ಕಾಯಕ ಸೇವೆಮಾಡುತ್ತಿದ್ದಾರೆ ಎಂದರು.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಿದ್ದಲಿಂಗೇಶ್ವರರ ಪವಾಡ ಭೂಮಿಯಾದ ಸಿದ್ದಗಂಗೆ ಕಗ್ಗೆರೆ, ನಿರ್ವಿಕಲ್ಪ ಸಮಾಧಿ ಎಡೆಯೂರು ಇರುವ ಪುಣ್ಯಭೂಮಿಯಾಗಿದ್ದು ಸಿದ್ದಲಿಂಗೇಶ್ವರ ಶತಮಾನೋತ್ಸವ ಎಂಬ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಲ್ಲಿ ಆಚರಿಸಬೇಕು ಎಂಬುದು ನಮ್ಮ ಅನಿಸಿಕೆಯಾಗಿದ್ದು ದಿನಾಂಕ ಮತ್ತು ಸ್ಥಳವನ್ನು ಆದಷ್ಟು ಬೇಗ ತಿಳಿಸುವುದಾಗಿ ಹೇಳಿದರು.
ವೀರಶೈವ ಲಿಂಗಾಯಿತರಲ್ಲಿ ಬಸವಣ್ಣ ಹಾಗೂ ಪಂಚಪೀಠಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಿದ್ದಲಿಂಗೇಶ್ವರರು ಸಮಾನವಾಗಿ ಎಲ್ಲಾ – ವರ್ಗದವರಿಂದ ಪೂಜಿತರಾದವರು. ಅಂತಹ ಪುಣ್ಯಪುರುಷರು ನಡೆದಾಡಿದ ಮಣ್ಣಿನಲ್ಲಿ ಜನಿಸಿರುವ ನಾವುಗಳು ಪುಣ್ಯವಂತರು ಎಂದರು.
ಆಲ್ಕೆರೆ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೇವಾಲಯ, ಮಠ, ಮಂದಿರಗಳಿಗೆ ಕರೆಯದೇ ಹೋಗಬೇಕು ಎಂಬುದು ಸತ್ಯ. ಕರೆಸಿಕೊಂಡು ಹೋಗುವುದು ಠಾಣೆ, ನ್ಯಾಯಾಲಯಗಳಿಗೆ. ಮಠ ಮಂದಿರ ಸ್ಥಳಗಳಿಗೆ ಹೋಗಿ ಸತ್ಕಾರ್ಯ, ಸತ್ಸಂಗ ಪ್ರವಚನಗಳಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ನೆಲಮಂಗಲದ ಬಸವಣ್ಣದೇವರ ಮಠದ ಸಿದ್ದಲಿಂಗಸ್ವಾಮಿಗಳು, ಬೆಂಗಳೂರಿನ ಕಡಬಗೆರೆ ಹಿರೇಮಠದ ಅನ್ನದಾನ ಸ್ವಾಮೀಜಿ, ಕೊಟ್ಲಿಪೇಟೆಯ ಕಲ್ಲುಮಠದ ಮಹಾಂತಸ್ವಾಮಿ, ಚಿಕ್ಕಮಸ್ಕಲ್ ಜಂಗಮ ಮಠದ ಬಸವಲಿಂಗಸ್ವಾಮೀಜಿ, ತಾ.ಪಂ ಸದಸ್ಯ ಕೆಂಪೇಗೌಡ, ಶಿವಸ್ವಾಮಿ , ಶಿವಪ್ರಸಾದ್, ಮಹಾದೇವಯ್ಯ ಹಾಗೂ ವಿದ್ವಾನ್ ಎನ್.ಹೆಚ್.ಪರಮೇಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
