ಅರಸೀಕೆರೆ ಎಸ್‍ಬಿಐ ಶಾಖೆ ವರ್ಗಾವಣೆ ವಿರೋಧಿಸಿ ಬ್ಯಾಂಕ್‍ಗೆ ಮುತ್ತಿಗೆ

ಪಾವಗಡ

          ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಅರಸೀಕೆರೆ ಗ್ರಾಮದಲ್ಲಿರುವ ಎಸ್‍ಬಿಐ ಬ್ಯಾಂಕ್ ಸ್ಥಳಾಂತರವಾಗುವುದನ್ನು ವಿರೋಧಿಸಿ, ಅರಸೀಕೆರೆ ಗ್ರಾಮಸ್ಥರು ಮತ್ತು ರೈತಸಂಘದ ಪದಾಧಿಕಾರಿಗಳು ಬ್ಯಾಂಕ್ ಮುಂಭಾಗ ಮಂಗಳವಾರ ಮುತ್ತಿಗೆ ಹಾಕಿದರು.

         ಪತ್ರಿಕಾ ಪ್ರತಿನಿಧಿ ನಿಂಗಪ್ಪ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಬ್ಯಾಂಕ್ ಇರಬೇಕು ಎಂಬ ನಿಯಮ ಇದೆ. ಮಂಗಳವಾಡ ಗ್ರಾಮದಲ್ಲಿ ಎಸ್‍ಬಿಐ ಶಾಖೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಅರಸೀಕೆರೆಯಲ್ಲಿ ಎಸ್‍ಬಿಐ ಶಾಖೆ ಪ್ರಾರಂಭವಾಗಿದೆ. ಗ್ರಾಮದ ಸುತ್ತಮುತ್ತ 59 ಹಳ್ಳಿಗಳಿವೆ. ಆ ಎಲ್ಲರೂ ನಿತ್ಯ ಸಾವಿರಾರು ರೂ.ಗಳ ವ್ಯವಹಾರ ನಡೆಸುತ್ತಿದ್ದಾರೆ.

        ಅಲ್ಲದೇ ಈ ಶಾಖೆ ಅಡಮಾನ ಸಾಲ ನೀಡುವಲ್ಲಿ ಉನ್ನತ ಶ್ರೇಣಿಯಲ್ಲಿದೆ ಎಂದು 3 ಸಾರಿ ಬಹುಮಾನ ಪಡೆದುಕೊಂಡಿರುತ್ತದೆ. ಅರಸೀಕೆರೆಯಿಂದ ನಿತ್ಯ ನೂರಾರು ಬಸ್‍ಗಳ ಸಂಚಾರ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬ್ಯಾಂಕನ್ನು ವಿಲೀನಗೊಳಿಸಬಾರದು ಎಂದು ಜನತೆ ಒತ್ತಾಯಿಸಿದ್ದಾರೆ.

        ಧರಣಿಗೆ ಬೆಂಬಲ ವ್ಯಕ್ತ ಪಡಿಸಿ ರಾಜ್ಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ವಿ. ನಾಗಭೂಷಣರೆಡ್ಡಿ ಮಾತನಾಡಿ, ಅರಸೀಕೆರೆಯ ಎಸ್‍ಬಿಐ ಶಾಖೆಯು ಮಂಗಳವಾಡದ ಶಾಖೆಗೆ ವೀಲೀನವಾಗುವುದನ್ನು ವಿರೋಧ ಮಾಡುತ್ತೇವೆ. ಒಟ್ಟು 11,500 ರೈತರ ಉಳಿತಾಯ ಖಾತೆಗಳಿದ್ದು, 7 ಕೋಟಿ 20 ಲಕ್ಷ ರೂ. ರೈತರ ಡಿಪಾಸಿಟ್ ಹಣ ಇದೆ. 9 ಕೋಟಿ ರೂಗಳನ್ನು ರೈತರಿಗೆ ಗೋಲ್ಡ್ ಮತ್ತಿತರ ಲೋನ್ ನೀಡಲಾಗಿದೆ.

         ಅರಸೀಕರೆ ಗ್ರಾ.ಪಂ.ಗೆ ಸೇರಿದ ಕಟ್ಟಡದಲ್ಲಿ ಬ್ಯಾಂಕ್ ಇದ್ದು, ಕೇವಲ 2 ಸಾವಿರ ರೂ. ಮಾತ್ರ ಬಾಡಿಗೆ ನೀಡಲಾಗುತ್ತಿದೆ. ಸರ್ಕಾರದ ಸಾಲಮನ್ನಾ ಆದೇಶಕ್ಕೆ ಕಾಯಲಾಗುತ್ತಿದೆ. ಸರ್ಕಾರದ ಆದೇಶ ಬಂದ ಮೇಲೆ ಎಲ್ಲಾ ಸಾಲವನ್ನು 15 ದಿನದಲ್ಲಿ ಜಮಾ ಮಾಡಲಾಗುತ್ತದೆ. ನೀವು ವರ್ಗಾವಣೆ ಮಾಡುತ್ತಿರುವ ಬ್ಯಾಂಕ್‍ನಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಕೂಡದು ಎಂದು ಒತ್ತಾಯಿಸಿದರು.

         ಬ್ಯಾಂಕ್‍ನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಎಡ್ಮಿನ್ ಡಿಸೋಜಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಎಡ್ಮಿನ್ ಡಿಸೋಜ ಮಾತನಾಡಿ, ನಿಮ್ಮ ಮನವಿಯನ್ನು ಬ್ಯಾಂಕ್‍ನ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

         ಮುತ್ತಿಗೆಯಲ್ಲಿ ಗ್ರಾ.ಪಂ. ಅಧ್ಯಕ್ಷ ರಾಜಣ್ಣ, ಗ್ರಾಮದ ಮುಖಂಡರಾದ ಸಿದ್ದಲಿಂಗಣ್ಣ, ಚಿಕ್ಕಣ್ಣ, ಕೃಷಿಕ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ. ಬಸವರಾಜು, ಮಹಂತೇಶ್, ಪಿ.ದೊಡ್ಡಣ್ಣ, ಎಚ್. ರಾಜಪ್ಪ, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ಪೂಜಾರ್ ದೊಡ್ಡಣ್ಣ, ಮಿಲಿಟರಿ ಹನುಮನಂತರಾಯ, ಗೋವಿಂದಪ್ಪ, ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap