ದಾವಣಗೆರೆ:
ಸ್ವಾತಂತ್ರ್ಯದ ನಂತರ ಭಾರತ ಐನೂರು ಎಂಬತ್ತಕ್ಕೂ ಹೆಚ್ಚು ಚಿಕ್ಕ ಚಿಕ್ಕ ಭಾಗಗಳಾಗಿ ಹರಿದು ಹಂಚಿ ಹೋಗಿದ್ದನ್ನು ಒಗ್ಗೂಡಿಸಿ ಒಂದು ಸುಂದರ ಭಾರತ ಭೂಪಟದ ನಕ್ಷೆಯಾಗಿ ತಯಾರಿಸಿದ ಕೀರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲಲಿದೆ ಎಂದು ಮನಶಾಸ್ತ್ರ ಹಾಗೂ ವಾಣಿಜ್ಯ ಶಾಶ್ತ್ರ ವಿಭಾಗದ ವೆಂಕಟೇಶ್ ಬಾಬು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಏಕತಾ ದಿವಸ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 143 ನೇ ಹುಟ್ಟುಹಬ್ಬದ ಸಂಕೇತವಾಗಿದೆ ಎಂದರು.
ಪ್ರಪಂಚದಲ್ಲಿ ಅತೀ ಎತ್ತರದ ಪ್ರತಿಮೆ ಎಲ್ಲಿದೆ ಎಂದು ಕೇಳಿದರೆ, ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತಹ ಮೂರ್ತಿ ಇರುವುದು ಭಾರತ ದೇಶದ ಉಕ್ಕಿನ ಮನುಷ್ಯನದು ಎಂದು ಹೆಳಲು ನಮಗೆಲ್ಲ ಹೆಮ್ಮೆಯಾಗಿದೆ ಹಾಗೂ ಅವರ ಜನ್ಮದಿನವನ್ನು ಏಕತಾ ದಿವಸ ಎಂದು ಆಚರಿಸುತ್ತಿರುವುದು ನಮಗೆಲ್ಲ ಖುಷಿಯ ವಿಚಾರ ಎಂದರು.
ಇತಿಹಾಸ ವಿಭಾಗದ .ವೀರೇಶ್ ಮಾತನಾಡಿ, ಭಾರತದ ಇತಿಹಾಸವನ್ನು ನೋಡುತ್ತಾ ಹೋದರೆ ಸಾಮ್ರಾಜ್ಯಶಾಹಿ ಹೋರಾಟ, ಭಾಷೆಗಾಗಿ ಹೋರಾಟ, ಏಕತೆಗಾಗಿ ಹೋರಾಟ ನಡೆಸುತ್ತಾ ನಾವು ಸ್ವಾತಂತ್ರ್ಯ ಪಡೆಯುವಂತಾಯಿತು. ನಂತರ ದಿನಗಳಲ್ಲಿ ಪಟೇಲರಂತಹ ಸದೃಢ ವ್ಯಕ್ತಿ ಇಲ್ಲದೇ ಹೋಗಿದ್ದರೆ ಇಂದು ಕೂಡಾ ನಾವು ಅದೇ ರೀತಿಯ ಆಡಳಿತದಲ್ಲಿ ಇರಬೇಕಾಗಿತ್ತು ಎಂದರು.
ಸತ್ಯಾಗ್ರಹದಲ್ಲಿ ರೈತ ಮತ್ತು ಕಾರ್ಮಿಕ ಚಳವಳಿಯಲ್ಲಿ ಮುಖ್ಯ ಪಾತ್ರ ವಹಿಸಿ ಗಾಂಧೀಜಿಯವರ ಮಾತಿಗೆ ಓಗೊಟ್ಟು ಚಳುವಳಿಯ ನಾಯಕರಾಗಿ ಜನರಿಂದ ಸರದಾರ್ ಬಿರುದು ಪಡೆದವರು ಪಟೇಲರು. ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿಯಾಗಬೇಕು ಎಂದರು.
ಕನ್ನಡ ವಿಭಾಗದ ಡಾಕ್ಟರ್ ಮಂಜಣ್ಣ ಎಂ ಮಾತನಾಡಿ, ಚರಿತ್ರೆಯ ಮಹತ್ವ ಅರಿತರೆ ವರ್ತಮಾನ ಮತ್ತು ಭವಿಷ್ಯ ಇದೆ ಎಂಬ ಅಂಬೇಡ್ಕರ್ ವಾಕ್ಯದೊಂದಿಗೆ ಏಕತಾ ದಿವಸ್ ಅನ್ನು ಆಚರಣೆ ಮಾಡಬೇಕಾಗಿದೆ. ಭೌಗೋಳಿಕವಾಗಿ ಏಕತೆ ಸಾಧಿಸುವುದಷ್ಟೇ ಅಲ್ಲದೆ ಪ್ರತಿಯೊಬ್ಬ ಭಾರತೀಯನು ಭಾವನಾತ್ಮಕವಾಗಿ ಏಕತೆ ಸಾಧಿಸಿದರೆ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶಂಕರ್ ಆರ್.ಶಿಲಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನು ಹಾಗೂ ಯುವಕರು ಸರ್ದಾರ್ ಪಟೇಲರನ್ನು ಆದರ್ಶ ವ್ಯಕ್ತಿಯನ್ನಾಗಿ ಇರಿಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಡಾ ಆರ್ ಸಿ ನಾಗರಾಜ್, ವಾಣಿಜ್ಯಶಾಸ್ತ್ರ ವಿಭಾಗದ ಡಾ.ಮರಳುಸಿದ್ದಪ್ಪ, ಮಂಜುನಾಥ್ ಜೆ ಎಂ, ಎಸ್ ಆರ್ ಭಜಂತ್ರಿ, ಭೀಮಣ್ಣ ಸುಣಗಾರ, ಗ್ರಂಥಪಾಲಕ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು ಮಲ್ಲೇಶ್ ನಿರೂಪಿಸಿದರು. ಅಕ್ಷತಾ ಪ್ರಾರ್ಥಿಸಿದರು, ಶೃತಿ ಸ್ವಾಗತಿಸಿದರು. ಸವಿತಾ ವಂದಿಸಿದರು .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ