ಬರ ಪರಿಸ್ಥಿತಿ ನಿರ್ವಹಣೆಗೆ 7ಕೋಟಿ ಮೀಸಲು

ತುಮಕೂರು:

      ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಸತತವಾಗಿ ಬರ ಪರಿಸ್ಥಿತಿ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಬರದ ಪರಿಸ್ಥಿತಿಯನ್ನು ನಿರ್ವಹಿಸಲು 7 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

       ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಆರೋಹಣ ಮಾಡಿದ ಬಳಿಕ ಅವರು ಮಾತನಾಡುತ್ತಿದ್ದರು. ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಲಿದೆ. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ ಬರದ ಪರಿಸ್ಥಿತಿ ಇದ್ದು, ಜನತೆ ಬರಕ್ಕೆ ಎದೆಗುಂದ ಬೇಕಾಗಿಲ್ಲ ಎಂದರು.

       ಕರ್ನಾಟಕವು ವಿವಿಧ ಧರ್ಮ ಸಂಸ್ಕøತಿಗಳ ಸಮಾಗಮವಾಗಿದೆ. ಹಿಂದು, ಮುಸ್ಲಿಂ, ಕ್ರೈಸ್ತರು, ಬೌದ್ಧರು, ಜೈನರು, ಸಿಖ್ಖರು ಮುಂತಾಗಿ ವಿವಿಧ ಧರ್ಮಗಳ ಧರ್ಮ ಸಹಿಷ್ಣುತೆ ಇಲ್ಲಿದೆ. ಸೌಹಾರ್ದತೆಯಿಂದ ಜನತೆ ಬದುಕುತ್ತಿದ್ದಾರೆ. ಶಾಂತಿಯ ತೋಟವಾದ ಕರ್ನಾಟಕದಲ್ಲಿ ಶಾಂತಿ ನೆಲೆಸುವಂತೆ ನಾವೆಲ್ಲರೂ ಮನಸ್ಸು ಮಾಡಬೇಕು.

        ಅಖಂಡ ಕರ್ನಾಟಕ ನಿರ್ಮಾಣ ಕನಸು ನನಸು ಮಾಡಲು ಶ್ರಮಿಸಿದ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈಜೋಡಿಸಬೇಕಿದೆ. ದೇಶ ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸಿತ್ತು. ಅವುಗಳಲ್ಲಿ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದ ಪ್ರದೇಶಗಳನ್ನು ಒಗ್ಗೂಡಿಸುವುದು ಮತ್ತು ಎಲ್ಲ ಭಾಷೆಗಳಿಗೂ ಪ್ರಾತಿನಿಧ್ಯ ನೀಡುವುದು ಪ್ರಮುಖವಾಗಿತ್ತು. ಆ ಸಂದರ್ಭದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ನೇತೃತ್ವದಲ್ಲಿ ದೇಶದಲ್ಲಿನ ರಾಜ್ಯಗಳ ಪುನರ್ ವಿಂಗಡಣೆ ಕಾರ್ಯವನ್ನು ನಡೆಸಲಾಯಿತು ಎಂದು ಸ್ಮರಿಸಿದರು.

       ಸಮಾರಂಭದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿ.ಪಂ.ಅಧ್ಯಕ್ಷೆ ಲತಾ ರವಿಕುಮಾರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿ.ಪಂ. ಸಿಇಒ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.

      ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಷ್ಟೇನು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿರಲಿಲ್ಲ. ಬೆಳಗ್ಗೆ 8.30 ರಿಂದ ಕ್ರೀಡಾಂಗಣದ ಕಡೆಗೆ ಜನತೆ ಬರುತ್ತಿದ್ದರಾದರೂ ಅತ್ಯಂತ ಬಿಗಿ ಪೊಲೀಸ್ ಪಹರೆ ನಾಗರಿಕರಲ್ಲಿ ಇರಿಸು ಮುರಿಸು ಮುಂಟು ಮಾಡಿತ್ತು. ಬೆರಳೆಣಿಕೆಯ ಸಾರ್ವಜನಿಕರು ಮಾತ್ರವೇ ಕ್ರೀಡಾಂಗಣದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಂಗಣದತ್ತ ವಾಹನಗಳನ್ನು ಬಿಡದಂತೆ ಸೂಚನೆ ಇದ್ದುದರಿಂದ ಅನೇಕ ಜನ ವಾಪಸ್ಸಾಗುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link