ದಾವಣಗೆರೆ:
22 ಕೆರೆಗಳ ಏತ ನೀರಾವರಿ ಯೋಜನೆಯಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಸ್ವತಃ ತಾವೇ ಖುದ್ದು ಸ್ಥಳ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ನಡೆಸಿರುವುದು ಸಾಬೀತಾದರೆ ಎಲ್ ಅಂಡ್ ಟಿ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನದಿಯಿಂದ 22 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಲ್ಲಿ ಎಲ್ ಅಂಡ್ ಟಿ ಕಂಪನಿ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಸ್ವತಃ ತಾವೇ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರ ಜೊತೆಗೆ ಸ್ಥಳ ಪರಿಶೀಲಿಸಿ, ಕಾಮಗಾರಿ ಕಳಪೆಯಾಗಿರಿವುದು ಕಂಡು ಬಂದರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದರು.
ಭದ್ರಾ ನಾಲೆ ವ್ಯಾಪ್ತಿಯಲ್ಲಿ, 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರಲ್ಲಿ ಇರುವಂತೆ ನೀರಿನ ಸಮಸ್ಯೆ ಎಲ್ಲಾ ಕಡೆಯಲ್ಲೂ ಇದ್ದೇ ಇದೆ. ನೀರಿನ ಪೈಪ್ ಲೈನ್ ಒಡೆದು, ಹೊಲ, ಗದ್ದೆ, ತೋಟಗಳಿಗೆ ನೀರು ಹಾಯಿಸಿಕೊಳ್ಳುವುದು ಎಲ್ಲಾ ಕಡೆಯೂ ಇದೆ. ಕೆರೆಗಳನ್ನು ತುಂಬಿಸುವಂತಹ ಏತ ನೀರಾವರಿ ಯೋಜನೆ ಪೈಪ್ ಲೈನ್ ಒಡೆಯುವುದು ಹಾಗೂ ಅಕ್ರಮವಾಗಿ ನೀರು ಪಡೆಯುವುದು ಸಹ ತಪ್ಪು ಎಂದರು.
ಶಿಷ್ಯ ವೇತನಕ್ಕೆ ಬದ್ಧ:
ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಕಿರಿಯ ವೈದ್ಯರಿಗೆ ನೀಡಬೇಕಾದ 8 ತಿಂಗಳ ಬಾಕಿ ಶಿಷ್ಯ ವೇತನವನ್ನು ಸರ್ಕಾರ ನೀಡಲು ಸಿದ್ಧವಿದೆ. ಈಗಾಗಲೇ ಕಿರಿಯ ವೈದ್ಯರ 8 ತಿಂಗಳ ಬಾಕಿ ವೇತನ ನೀಡಲು ಸರ್ಕಾರದ ಮಟ್ಟದಲ್ಲಿ ತಾವು ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿ, ಸಮಸ್ಯೆ ಪರಿಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶಿಷ್ಯ ವೇತನ ಸರ್ಕಾರ ಭರಿಸಲಿದೆ. ಆದ್ದರಿಂದ ಕಿರಿಯ ವೈದ್ಯರು ಮುಷ್ಕರ ಬಿಟ್ಟು, ಸೇವೆ ಆರಂಭಿಸಬೇಕೆಂದು ಸೂಚಿಸುತ್ತೇವೆ ಎಂದರು.
ಈ ವರ್ಷದ ಶಿಷ್ಯ ವೇತನವನ್ನು ಮಾತ್ರ ಸರ್ಕಾರ ಭರಿಸಲಿದ್ದು, ಮುಂದಿನ ವರ್ಷದಿಂದ ಜಿಲ್ಲಾ ಆಸ್ಪತ್ರೆ ಮತ್ತು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕ್ಲಿನಿಕಲ್ ವೆಚ್ಚದಲ್ಲಿ ಶಿಷ್ಯ ವೇತನವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಳ್ ಕಳ್ಳರಿಗೆ ಗೊತ್ತು:
ಜನಾರ್ದನ ರೆಡ್ಡಿ, ಡಿ.ಕೆ.ಶಿವಕುಮಾರ ದೊಡ್ಡ ರಾಜಕಾರಣಿಗಳು. ಇಬ್ಬರಲ್ಲೂ ಯಾವ ಬಾಂಬ್ ಇದೆಯೋ? ಯಾವ ಕ್ಲಿಪ್ ಇದೆಯೋ ನಮಗೆ ಗೊತ್ತಿಲ್ಲ. ಇಬ್ಬರೂ ಇಂದು ಯಾವ ಬಾಂಬ್ ಸಿಡಿಸುತ್ತಾರೆಂಬುದೂ ನಮಗೆ ಗೊತ್ತಿಲ್ಲ. ಅದೆಲ್ಲಾ ಕಳ್ ಕಳ್ಳರಿಗೆ ಗೊತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ