ತುಮಕೂರು
ತುಮಕೂರು ನಗರದ ಒಂದು ಹೋಟೆಲ್ ಮತ್ತು ನಾಲ್ಕು ಮಳಿಗೆಗಳ ಮೇಲೆ ತುಮಕೂರು ಮಹಾನಗರ ಪಾಲಿಕೆಯವರು ಅನಿರೀಕ್ಷಿತ ದಾಳಿ ನಡೆಸಿ, ಅಲ್ಲಿದ್ದ ಸುಮಾರು 420 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು, ಒಟ್ಟು 23,000 ರೂ. ದಂಡ ವಿಧಿಸಿರುವ ಪ್ರಸಂಗ ಶುಕ್ರವಾರ ಬೆಳಗ್ಗೆ ನಡೆದಿದೆ.
ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾದ ಹಾಗೂ ಮಹಾನಗರ ಪಾಲಿಕೆ ಕಚೇರಿ ಎದುರಿಗೇ ಇರುವ ಉಡುಪಿ ಡಿಲಕ್ಸ್ ಹೋಟೆಲ್‌ಗೆ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ದಿಢೀರ್ ದಾಳಿ ನಡೆಸಿ, ಅಲ್ಲಿನ ಅಡುಗೆ ತಯಾರಿಕಾ ವಿಭಾಗದಲ್ಲಿ ಇಡ್ಲಿ ಬೇಯಿಸಲು ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ. ಒಡನೆಯೇ ಅಲ್ಲಿದ್ದ ಎಲ್ಲ ಪ್ಲಾಸ್ಟಿಕ್ ಹಾಳೆಯನ್ನು ವಶಪಡಿಸಿಕೊಂಡ ಅಧಿಕಾರಿಗಳು, ಹೋಟೆಲ್‌ನವರಿಗೆ 1,000 ರೂ. ಸ್ಥಳದಂಡ ವಿಧಿಸಿದ್ದಾರೆ.
ಬಳಿಕ ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪಾಲಿಕೆ ಅಧಿಕಾರಿಗಳು ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಮಂಡಿಪೇಟೆಯಲ್ಲಿ ನಾಲ್ಕು ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.
ವಿಶಾಲ್ ಪ್ಲಾಸ್ಟಿಕ್ ಎಂಬ ಮಳಿಗೆಯಲ್ಲಿ 20 ಕೆ.ಜಿ.ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಇದ್ದುದು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡು 2000 ರೂ. ದಂಡ ವಿಧಿಸಲಾಗಿದೆ.
ರಾಹುಲ್ ಮಾರ್ಕೆಟಿಂಗ್ ಮತ್ತು ಅಂಜನ್ ಸ್ಟೋರ್ಸ್ ಎಂಬ ಮಳಿಗೆಗಳಲ್ಲಿ ತಲಾ 50 ಕೆ.ಜಿ.ಗಳಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವೆರಡೂ ಮಳಿಗೆಗಳಿಗೆ ತಲಾ 5,000 ರೂ.ಗಳಂತೆ ದಂಡ ವಿಧಿಸಿದ್ದಾರೆ.
ಹಿಂದೂಸ್ಥಾನ್ ಪ್ಲಾಸ್ಟಿಕ್ಸ್ ಎಂಬ ಮಳಿಗೆಯಲ್ಲಿ ಸುಮಾರು 300 ಕೆ.ಜಿ.ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ದೊರೆತಿವೆ. ಈ ಮಳಿಗೆಯವರಿಗೆ 10,000 ರೂ. ದಂಡ ವಿಧಿಸಿದ್ದಾರೆ.
ಇವೆಲ್ಲವುಗಳಿಂದ ಒಟ್ಟಾರೆ 420 ಕೆ.ಜಿ.ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ 23,000 ರೂ. ದಂಡ ಸಂಗ್ರಹವಾಗಿದೆ.
ದಂಡದ ಮೊತ್ತ ದುಪ್ಪಟ್ಟು
‘‘ರಾಹುಲ್ ಮಾರ್ಕೆಟಿಂಗ್, ಅಂಜನ್ ಸ್ಟೋರ್ಸ್, ಹಿಂದುಸ್ಥಾನ್ ಮಾರ್ಕೆಟಿಂಗ್ ಮಳಿಗೆಗಳಲ್ಲಿ ಇದು ಎರಡನೆಯ ದಾಳಿ ಆಗಿರುವುದರಿಂದ, ನಿಯಮಾನುಸಾರ ದಂಡವನ್ನು ದುಪ್ಪಟ್ಟುಗೊಳಿಸಲಾಗಿದೆ’’ ಎಂದು ಪರಿಸರ ಇಂಜಿನಿಯರ್ ಮೋಹನ್‌ಕುಮಾರ್ ಅವರು ‘‘ಪ್ರಜಾಪ್ರಗತಿ’’ಗೆ ತಿಳಿಸಿದರು.
ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಕೆ.ನಾಗೇಶ್ ಕುಮಾರ್ ಅವರ ನೇತೃತ್ವದಲ್ಲಿ ಪರಿಸರ ಇಂಜಿನಿಯರ್‌ಗಳಾದ ಮೋಹನ್ ಕುಮಾರ್, ಮೃತ್ಯುಂಜಯ ಮತ್ತು ಕೃಷ್ಣಮೂರ್ತಿ, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಚಿಕ್ಕಸ್ವಾಮಿ, ಮನೋಹರ್, ಸಚಿನ್, ರುದ್ರೇಶ್ ಅವರು ಈ ದಾಳಿಯನ್ನು ನಡೆಸಿದರು. ವಶಪಡಿಸಿಕೊಳ್ಳಲಾದ ನಿಷೇಧಿತ ಪ್ಲಾಸ್ಟಿಕ್ ಪದಾರ್ಥಗಳನ್ನು ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಗಿದೆ.
ಪಾಲಿಕೆ ಕ್ರಮ ಕೈಗೊಳ್ಳಲಿ
‘‘ನಗರದ ಅನೇಕ ಹೋಟೆಲ್‌ಗಳಲ್ಲಿ ಹಾಗೂ ಬೀದಿ ಬದಿ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡಿಕೊಡುವಾಗ ನಿಷೇಧಿತ ತೆಳುವಾದ ಪ್ಲಾಸ್ಟಿಕ್ ಹಾಳೆಯನ್ನೇ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಹಾಳೆ ಆರೋಗ್ಯಕ್ಕೆ ಅಪಾಯವೆಂದು ಗೊತ್ತಿದ್ದರೂ, ಪದೇ ಪದೇ ಅದನ್ನೇ ಬಳಸಲಾಗುತ್ತಿದೆ. ಇದರ ಬದಲು ಬಾಳೆ ಎಲೆ ಅಥವಾ ಮುತ್ತುಗದ ಎಲೆ ಬಳಸಬಹುದು. ಈ ನಿಟ್ಟಿನಲ್ಲಿ ಪಾಲಿಕೆಯವರು ಸೂಕ್ತ ಅರಿವು ಮೂಡಿಸಬೇಕು ಹಾಗೂ ಕ್ರಮ ಜರುಗಿಸಬೇಕು’’ ಎಂದು ಪ್ರಜ್ಞಾವಂತ ನಾಗರಿಕರು ಪ್ರತಿಕ್ರಿಯಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ