ಬೆಂಗಳೂರು
ಹಣದಾಸೆಗೆ ಅಂಗಾಗ ದಾನದ ಕೃತ್ಯಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಬಂದ 52 ವರ್ಷದ ವ್ಯಕ್ತಿಯೊಬ್ಬ 1.6 ಕೋಟಿ ರೂ ಹಣ ನೀಡಿದರೆ ತನ್ನ ಕಿಡ್ನಿ ದಾನ ಮಾಡುವುದಾಗಿ ಹೇಳಿ ವೈದ್ಯರನ್ನು ದಂಗು ಬಡಿಸಿದ್ದಾನೆ.
ಆಸ್ಪತ್ರೆಯ ಖ್ಯಾತ ಅಂಗಾಗ ಜೋಡಣಾ ತಜ್ಞರ ಬಳಿ ಬಂದ ವ್ಯಕ್ತಿಯೊಬ್ಬ ನನಗೆ ಹಣಕಾಸಿನ ತೊಂದರೆಯಿದ್ದು ನನ್ನ ಕಿಡ್ನಿಯನ್ನು 1.6 ಕೋಟಿ ರೂಗೆ ದಾನ ಮಾಡಲಿದ್ದೇನೆ ಎಂದು ಹೇಳಿದ್ದನ್ನು ಕೇಳಿ ಅಚ್ಚರಿಗೊಂಡು ಉಳಿದ ವೈದ್ಯರ ಬಳಿ ವಿಷಯ ತಿಳಿಸಿದ್ದಾರೆ.
ಕಿಡ್ನಿ ಮಾರಲು ಬಂದ ವ್ಯಕ್ತಿಯು ಗಾಯತ್ರಿನಗರದ ಎಂ ಬಿ ಸೋಮಶೇಖರ್ ಎಂದು ತಿಳಿದುಬಂದಿದ್ದು ಆತ ವೆಬ್‍ಸೈಟ್ ಮೂಲಕ ಡಾ. ಅರುಣ್ ವೆಸ್ಲೆ ಡೇವಿಡ್ ಅಲ್ಲದೇ ಇನ್ನಿಬ್ಬರು ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಿರುವುದಾಗಿ ತಿಳಿಸಿದ್ದ ಅಲ್ಲದೇ ಡಾ.ಡೇವಿಡ್ ಎಂಬುವವರು ಹಣಕ್ಕಾಗಿ ಮೂತ್ರಪಿಂಡಗಳ ಖರೀದಿ ಮತ್ತು ಮಾರಾಟ ಮಾಡುವುದಾಗಿಯೂ ತಿಳಿಸಿದ್ದಾನೆ.
ಇದೊಂದು ಹಗರಣ ಎಂಬ ಅನುಮಾನದ ಹಿನ್ನಲೆಯಲ್ಲಿ ಆಸ್ಪತ್ರೆಯ ರೆನಾಲ್ ಟ್ರಾನ್ಸ್ ಪ್ಲಂಟ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಡೆವಿಡ್ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.ಈ ಕುರಿತು ತೀವ್ರ ವಿಚಾರಣೆ ಕೈಗೊಂಡಾಗ ಕೂಡ ವ್ಯಕ್ತಿ ಸೋಮಶೇಖರ್,ಡಾ.ದೇವಿಡ್ ಹಾಗೂ ಸಮನ್ವಯಾಧಿಕಾರಿ ಪರಿಜಿತಾ ದಲ್ ಅವರೊಂದಿಗೆ ವಾಟ್ಸ್‍ಆಪ್ ನಲ್ಲಿ ನಿರಂತರ ಸಂಪರ್ಕದಲ್ಲಿರುವುದಾಗಿ ಹಾಗೂ ಮೂತ್ರಪಿಂಡ ಮಾರಾಟದ ಬಗ್ಗೆ ಅವರು ವಿವರಗಳನ್ನು ತಿಳಿಸಿರುವುದಾಗಿಯೂ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ. ಅಲ್ಲದೇ ತನಿಖಾಧಿಕಾರಿಗಳು ಈ ಕುರಿತ ವಾಟ್ಸ್ ಆಪ್ ಸಂದೇಶಗಳನ್ನು ಪರಿಶೀಲಿಸಿದ್ದಾರೆ.
ಡಯಾಲಿಸಿಸ್‍ಗೆ ಒಳಗಾದ ಸಂಭಾವ್ಯ ರೋಗಿಗೆ ಮೂತ್ರಪಿಂಡದ ಅಗತ್ಯವಿದ್ದು,ಅದಕ್ಕಾಗಿ ತನ್ನನ್ನು ಸಂಪರ್ಕಿಸಿದ್ದು, 1.6 ಕೋಟಿ ರೂಗೆ ಡಾ. ಡೆವಿಡ್ ಜತೆಗೆ ಮಾತನಾಡಿರುವುದಾಗಿ ಶೋಮಶೇಖರ್ ತಿಳಿಸಿದ್ದಾನೆ. ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ತೆಗೆದುಕೊಂಡು ಆಸ್ಪತ್ರೆಗೆ ಬರುವಂತೆ ಹಾಗೂ ಆಸ್ಪತ್ರೆಯಲ್ಲಿ ಕಿಡ್ನಿ ಮಾರಾಟಕ್ಕೆ ಸಂಬಂಧಿಸಿದ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಹೇಳಿದ್ದಾಗಿ ಸೋಮಶೇಖರ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಮಣಿಪಾಲ್ ಆಸ್ಪತ್ರೆಯ ವೈದ್ಯರ ಹೆಸರಲ್ಲಿಯೂ ಇಂತದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ದುಷ್ಕರ್ಮಿಗಳು ಪ್ರಸಿದ್ಧ ಆಸ್ಪತ್ರೆ ಹಾಗೂ ವೈದ್ಯರ ಹೆಸರಲ್ಲಿ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಂಗಾಂಗ ಮಾರಾಟ ಹಾಗೂ ಖರೀದಿ ಹೆಸರಲ್ಲಿ ವಂಚನೆ ನಡೆಸುತ್ತಿದ್ದು, ಇದರ ಹಿಂದೆ ಬಹುದೊಡ್ಡ ಜಾಲವೇ ಅಡಗಿರುವುದಂತು ಸತ್ಯ. ಈ ನಿಟ್ಟಿನಲ್ಲಿ ಖಚಿತ ತನಿಖೆಗಳು ನಡೆದ ಬಳಿಕ ಸತ್ಯಾಸತ್ಯತೆ ಬಯಲಿಗೆ ಬರಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ