ಜಮುರಾ ನಾಟಕೋತ್ಸವಕ್ಕೆ ಚಾಲನೆ

ಚಿತ್ರದುರ್ಗ :

         ಮುರುಘಾಮಠದಲ್ಲಿ ಜಮುರಾ ಕಲಾಲೋಕ, ಸಾಟಿ ಚೆನ್ನಮ್ಮ ಹಾಲಪ್ಪ ಸಾಂಸ್ಕøತಿಕ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ವೀರಶೆವ ಸಮಾಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಇನ್ನಿತರೆ ಸಂಘಸಂಸ್ಥೆಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಜಮುರಾ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.

         ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮನುಷ್ಯನಿಗೆ ಬೇಕಾದ ಸಂತೋಷ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದೊರೆಯುತ್ತದೆ. ದುಃಖ ದುಮ್ಮಾನಗಳನ್ನು ಮರೆಯಲು ನಾಟಕ, ರಂಗಭೂಮಿಯಲ್ಲಿ ಸಿಗುತ್ತದೆ. ನಾಟಕಗಳನ್ನು ನೋಡುವುದರಿಂದ ಪ್ರತ್ಯಕ್ಷ ಸಂತೋಷ ಸಿಗುತ್ತದೆ. ವೀಕ್ಷಕರ ಗಮನವನ್ನು ಸೆಳೆಯುವ ಸಂದರ್ಭಗಳು ನಾಟಕಗಳಲ್ಲಿವೆ. ನಾಟಕ ಅತ್ಯಂತ ರಂಜನೆಯನ್ನು ನೀಡಬೇಕಾದರೆ ನೋಡುಗರಲ್ಲಿ ಪಾತ್ರಗಳು ಒಳಹೋಗಬೇಕು ಎಂದು ತಿಳಿಸಿದರು.

         ನಾಟಕೋತ್ಸವವನ್ನು ಉದ್ಘಾಟಿಸಿದ ಹಿರಿಯ ರಂಗಭೂಮಿ ಮತ್ತು ಚಲನಚಿತ್ರನಟ ಶ್ರೀನಿವಾಸಮೂರ್ತಿ ಮಾತನಾಡಿ, ಹುಟ್ಟು ಸಾವಿನ ಮಧ್ಯೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಬೇಕು ಎಂದರಲ್ಲದೆ, ತಾವು ನಾಟಕ ರಂಗಕ್ಕೆ ಹಾಗು ಸಿನೆಮಾ ರಂಗಕ್ಕೆ ಬಂದ ಹಿನ್ನೆಲೆಯನ್ನು ವಿವರಿಸಿದರು. ಕಣ್ಣುಮುಚ್ಚುವ ಮುನ್ನ ಕಣ್ತೆರೆಯಬೇಕು ಎಂದು ಹೇಳಿದರು.

       ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನ ಕಾಲದಲ್ಲಿ ನಾಟಕಗಳ ಮೂಲಕ ಮನರಂಜನೆ ಸಿಗುತ್ತಿತ್ತು. ಮಾಧ್ಯಮಗಳು ಇಷ್ಟೊಂದು ಬೆಳೆದಿರಲಿಲ್ಲ. ಬೇಸಿಗೆ ಕಾಲದಲ್ಲಿ ಪ್ರತಿ ಊರಿನಲ್ಲಿ ನಾಟಕವಾಡುತ್ತಿದ್ದರು. ಜಾತ್ರೆ, ಹಬ್ಬ ಹರಿದಿನಗಳಲ್ಲಿ ನಾಟಕಗಳ ಮೂಲಕ ಇಡೀ ಊರು ಹಬ್ಬದ ವಾತಾವರಣವನ್ನು ಉಂಟುಮಾಡುತ್ತಿತ್ತು. ಶ್ರೀಗಳು ಚಿತ್ರದುರ್ಗ ಜಿಲ್ಲೆಗೆ ಮಳೆ ಬಾರದೆ ಇರುವುದನ್ನು ಕಂಡು ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಒತ್ತಡವನ್ನು ಹಾಕುತ್ತಿದ್ದಾರೆ.

          ನಾನು ಕೂಡ ಇದೇ ಭಾಗದವನಾಗಿರುವುದರಿಂದ ನನಗೂ ಕಾಳಜಿ ಇದೆ. ಅತ್ಯಂತ ತ್ವರಿತ ಗತಿಯಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಈ ವರ್ಷ ಡಿಸೆಂಬರ್ ಅಂತ್ಯದೊಳಗೆ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಬಿಡಲಾಗುವುದು. ಇದರಿಂದ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಜನರಿಗೆ ಕುಡಿಯುವ ನೀರಿನ ಬವಣೆ ನೀಗಲಿದೆ. ವಾಣಿ ವಿಲಾಸ ಸಾಗರಕ್ಕೆ 5 ಟಿಎಂಸಿ ನೀರು ಬಿಡುವಂತೆ ಶ್ರೀಗಳು ಕೇಳಿದ್ದಾರೆ. ಇದರ ಬಗ್ಗೆ ಗಮನಹರಿಸುತ್ತೇವೆ. ಸ್ವಾತಂತ್ರ್ಯ ಬಂದು 70ವರ್ಷವಾದರೂ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ. ನಾವು ಶಾಶ್ವತವಲ್ಲ; ನಾವು ಮಾಡಿದ ಕಾರ್ಯಗಳು ಶಾಶ್ವತ ಎಂದು ಹೇಳಿದರು.

         ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ, ಶ್ರೀಗಳು ಎಲ್ಲವರ್ಗದ ಜನರನ್ನು ಒಂದೆಡೆ ತಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

         ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಕನ್ನಡ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಾಟಕಗಳು ಭಾಷೆಯ ಅಭಿಮಾನವನ್ನು ಮೂಡಿಸುತ್ತವೆ. ರಂಗಭೂಮಿಯಲ್ಲಿ ಅನೇಕರಿಗೆ ಅವಕಾಶಗಳು ಸಿಗುತ್ತವೆ ಎಂದು ಹೇಳಿದರು.

         ಸನ್ಮಾನ ಸ್ವೀಕರಿಸಿ ಮಾತನಾಡಿದ, ರಂಗಭೂಮಿ ಹಾಗು ಚಲನಚಿತ್ರ ಕಲಾವಿದೆ ಕು| ಎಂ.ಎಸ್. ಶಾಂತಲಾ, ಎಲ್ಲರ ಮನಸ್ಸನ್ನು ಗೆಲ್ಲುವ ಅಪೂರ್ವ ಶಕ್ತಿ ನಾಟಕಕ್ಕಿದೆ. ಹವ್ಯಾಸಿ ನಾಟಕ ತಂಡಗಳು ಇಂದು ಬರುತ್ತಿವೆ. ಅನೇಕರಿಗೆ ಬದುಕಿಗೆ ಅವಕಾಶಗಳನ್ನು ಮಾಡಿಕೊಟ್ಟಿದೆ. ಕರ್ನಾಟಕ ರತ್ನಗಳನ್ನು ಕೊಟ್ಟಿದೆ. ದೊಡ್ಡ ಕಲಾವಿದರು ರಂಗಭೂಮಿಯಿಂದಲೇ ಬಂದವರು. ಕಲಾವಿದರನ್ನು ಕಂಡರೆ ನನಗೆ ಅತೀವ ಸಂತೋಷ ಎಂದು ನುಡಿದರು.

         ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿದರು . ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಹಾಲಪ್ಪ ನಾಯಕ ನಿರೂಪಿಸಿದರು. ಎಂ.ಸಿ.ಮಂಜುನಾಥ್ ಶರಣು ಸಮರ್ಪಣೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link