ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ರೋಗಗಳ ಬಗ್ಗೆ ಅರಿವು ಆಂದೋಲನ

ಹುಳಿಯಾರು

      ಸಮೀಪದ ಕೆಂಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಹೆಚ್ 1 ಎನ್1, ಡೆಂಗ್ಯೂ ರೋಗ ಮತ್ತು ಕ್ಯಾನ್ಸರ್ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.

     ಕಾರ್ಯಕ್ರಮದಲ್ಲಿ ಯಳನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯ್ ಕುಮಾರ್ ಮಾತನಾಡಿ, ಕ್ಯಾನ್ಸರ್ ರೋಗವನ್ನು ಮುಂಚಿತವಾಗಿ ಪತ್ತೆ ಹಚ್ಚಿದರೆ ಮುಂದೆ ಸಂಭವಿಸಬಹುದಾದ ಸಾವುಗಳನ್ನು ತಡೆಗಟ್ಟಬಹುದು. ಹೊಟ್ಟೆ ನೋವು, ಅಧಿಕ ರಕ್ತಸ್ರಾವ ಇತರ ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾ ಕ್ಯಾನ್ಸರ್ ಘಟಕದಲ್ಲಿ ಪರೀಕ್ಷಿಸಿಕೊಳ್ಳಲು ತಿಳಿಸಿದರು.

      ಹೆಲ್ತ್ ಇನ್‍ಸ್ಪ್ಪೆಕ್ಟರ್ ರೇಣುಕರಾಜ ಬಿ.ಸಿ ಮಾತನಾಡಿ, ದೇಹದ ಯಾವುದೇ ಭಾಗದಲ್ಲಿ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಇದ್ದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು. ಏಕೆಂದರೆ ಆ ಮಚ್ಚೆಗಳು ಕುಷ್ಟರೋಗದ ಮಚ್ಚೆಗಳಾಗಿರಬಹುದು. ಪರೀಕ್ಷಿಸದೆ ಇದ್ದಲ್ಲಿ ಆ ಮಚ್ಚೆಗಳಿಂದ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕುಷ್ಠರೋಗಕ್ಕೆ ಉಚಿತ ಚಿಕಿತ್ಸೆ ಇದೆ ಎಂದರು.

      ಹೆಚ್ 1 ಎನ್1 ಗಾಳಿಯ ಮೂಲಕ ಹರಡುತ್ತದೆ. ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಹೆಚ್ 1 ಎನ್1 ರೋಗ ತಡೆಗಟ್ಟಲು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸುವುದು, ಕೈಗಳನ್ನು ತೊಳೆದುಕೊಳ್ಳುವುದು, ಜನಸಂದಣಿ ಪ್ರದೇಶಕ್ಕೆ ಹೋಗುವಾಗ ಮುಂಜಾಗ್ರತಾ ಕ್ರಮವಹಿಸುವುದು ಮಾಡಬೇಕು ಎಂದರು.

       ಕಾರ್ಯಕ್ರಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಾಗವೇಣಿ, ಆಶಾ ಕಾರ್ಯಕರ್ತೆಯರಾದ ಪುಷ್ಪ, ಜ್ಯೋತಿ, ಚಂದ್ರಮ್ಮ, ರೇಣುಕಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಕಲಾವತಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ವಿಜಯಕುಮಾರಿಯವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link