ಮಧುಗಿರಿ
ಕನ್ನಡವನ್ನು ಪ್ರತಿಯೊಂದು ವಿಚಾರದಲ್ಲಿ ಹೆಚ್ಚಾಗಿ ಬಳಸುವುದರ ಮೂಲಕ ಕನ್ನಡ ಭಾಷೆ ಬೆಳೆಯಲು ಸಹಕಾರಿಯಾಗುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲ್ಲೂಕಿನ ಬಿಜವರ ಗ್ರಾಮದಲ್ಲಿ ಮಧುಗಿರಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಕನ್ನಡ ನಾಡು ನುಡಿ ಜಾಗೃತಿ ವಿಷಯವಾಗಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕನ್ನಡ ಕರುಳಾಗಲಿ, ಕಣ್ಣಾಗಲಿ, ಕನ್ನಡ ಚಿಂತನೆ ವೇದಿಕೆಗೆ ಸೀಮಿತವಾಗದೆ ಬದುಕಿನ ಬದ್ದತೆಯಾಗಬೇಕು ಎಂದರು.
ತಾಲ್ಲೂಕು ಕ ಸಾ ಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ, ಫ್ರಾನ್ಸ್ ದೇಶದಲ್ಲೂ ಇಂಗ್ಲೀಷ್ ಭಯವಿತ್ತು. ಹೀಗಾಗಿ ಆ ದೇಶದಲ್ಲಿ ಭಾಷಾ ಕಾನೂನು ಜಾರಿ ಮಾಡಿ ಫ್ರ್ರೆಂಚ್ ಭಾಷೆ ಬಳಕೆಗೆ ಹೆಚ್ಚು ಒತ್ತು ನೀಡಿ ಜತೆಯಲ್ಲಿ ಮಾತೃ ಭಾಷೆ ಬಳಸದವರಿಗೆ ಮೂರು ವರ್ಷ ಜೈಲು ಎಂಬ ಕಠಿಣ ಕಾನೂನು ಜಾರಿ ಮಾಡಲಾಗಿತ್ತು. ಅಲ್ಲಿನ ಜನತೆ ಆಂಗ್ಲ ಭಾಷೆ ವ್ಯಾಮೋಹ ತೊರೆದು ಫ್ರೆಂಚ್ ಭಾಷೆ ಬಳಸಲು ಆರಂಭಿಸಿದರು. ಇದೇ ರೀತಿ ನಮ್ಮಲ್ಲಿಯೂ ಕಾನೂನು ತಂದರೆ ಭಾಷೆ ಸಮೃದ್ದಿಯಾಗಿ ಬೆಳೆಯುತ್ತದೆ ಎಂದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ಶಿವದಾಸ್ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಇದ್ದೂ, ಅಮೇರಿಕಾದಲ್ಲೂ ಅಕ್ಕಾ ಸಮ್ಮೇಳನ ಮಾಡುತ್ತಿರುವುದು ನಮ್ಮ ಕನ್ನಡ ಭಾಷೆ ಹೊರ ದೇಶಗಳಿಗೂ ವಿಸ್ತರಿಸಿದೆ. ಆದರೆ ನಮ್ಮ ಕರ್ನಾಟಕದ ಗಡಿ ಭಾಗಗಳಲ್ಲಿ ಪರಭಾಷಿಗರಿಂದ ನಮ್ಮ ಮಾತೃ ಭಾಷೆ ಕನ್ನಡ ಮರೆಯಾಗುತ್ತಿದೆ ಎಂದು ತಿಳಿಸಿ, ಶಿಬಿರಾರ್ಥಿಗಳು ಗ್ರಾಮದಲ್ಲಿನ ಮನೆಗಳಿಗೆ ಭೇಟಿ ನೀಡಿ ಲಾರ್ವ ಸೊಳ್ಳೆಗಳ ಉತ್ಪತ್ತಿ ಆರೋಗ್ಯಧಿಕಾರಿಗಳ ಜತೆ ಗ್ರಾಮಸ್ಥರಿಗೆ ಅರಿವು ಮೂಡಿಸಿರುವುದು ಶ್ಲಾಘನೀಯ ಎಂದರು.
ವರದಾಯಿನಿ ಸೇವಾ ಟ್ರಸ್ಟ್ ಮುಖ್ಯಸ್ಥೆ ಗಾಯತ್ರಿನಾರಾಯಣ್ ನೇತ್ರದಾನ ಮಹಾದಾನ, ನಿಧನಾ ನಂತರ ತಮ್ಮ ಕಣ್ಣುಗಳು ಮಣ್ಣಲ್ಲಿ ಮಣ್ಣಾಗುವ ಬದಲು ನಿಧನಾ ನಂತರ ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಬೇಕು ಎಂದು ಮನವಿ ಮಾಡಿ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಬಂಡಿಚೌಡಯ್ಯ, ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹಾರಾಜು, ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ರಾಮಚಂದ್ರಪ್ಪ, ಪತ್ರಕರ್ತರಾದ ಆರ್.ಮುಂಜುನಾಥ್. ಟಿ.ಪ್ರಸನ್ನ ಕುಮಾರ್, ಕುರುಬರಹಳ್ಳಿ ಚಂದ್ರೇಗೌಡ, ಶಿಬಿರಾಧಿಕಾರಿ ನರಸಿಂಹಮೂರ್ತಿ, ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








