ಮಧುಗಿರಿ
ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬ ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿ, ಆಕೆ ಗರ್ಭಿಣಿಯಾದ ನಂತರ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆಂದು ಆರೋಪಿಸಿ ಗರ್ಭಿಣಿಯೊಬ್ಬಳು ನ್ಯಾಯಕ್ಕಾಗಿ ಎರಡು ದಿನಗಳ ಹಿಂದೆ ಯುವಕನ ಮನೆ ಎದುರು ಧರಣಿ ನಡೆಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರ ಗ್ರಾಮದ ದೊಡ್ಡಯ್ಯನವರ ಮಗ ಸಿದ್ದಲಿಂಗಪ್ಪ ಎಂಬಾತ ಕಳೆದ ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಚನ್ನಪಟ್ಟಣ ಮೂಲದ ಯುವತಿಯನ್ನು ಫೇಸ್‍ಬುಕ್ ಮೂಲಕ ಪರಿಚಯಿಸಿಕೊಂಡು ಪ್ರೀತಿಸಿದ್ದಾನೆ. ನಂತರ ಆಕೆಗೆ ನಿಗದಿಯಾಗಿದ್ದ ಮದುವೆಯನ್ನು ತಪ್ಪಿಸಿ, ಬೆಂಗಳೂರಿನಲ್ಲಿ ಮದುವೆಯಾಗಿದ್ದಾನೆ. ಸುಮಾರು ತಿಂಗಳ ಕಾಲ ಈ ಜೋಡಿ ಬೆಂಗಳೂರಿನ ಹೆಗ್ಗೆರೆ ಬಳಿ ಬಾಡಿಗೆಯ ಮನೆಯಲ್ಲಿ ಸಂಸಾರ ನಡೆಸಿದ್ದರು.
ಆಕೆ ಗರ್ಭಿಣಿಯಾಗುತ್ತಿದ್ದಂತೆ ಸಿದ್ದಲಿಂಗಪ್ಪ ಆಕೆಯನ್ನು ಮಧುಗಿರಿಗೆ ಕರೆತಂದು ಗರ್ಭಪಾತ ಮಾಡಿಸಲು ಮುಂದಾಗಿದ್ದನೆಚಿದೂ, ಗರ್ಭಪಾತಕ್ಕೆ ಯುವತಿ ಒಪ್ಪದಿದ್ದಾಗ ಆಕೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿದ್ದಲಿಂಗಪ್ಪ ಕೆಲಸ ಮಾಡುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಯಾರಿಗೂ ಸಿಗದೆ ನಾಪತ್ತೆಯಾಗಿದ್ದಾನೆ.
ಒಂದು ತಿಂಗಳಿನಿಂದ ನಾಪತ್ತೆಯಾದ ಗಂಡನಿಗಾಗಿ ಕಾದು ಕುಳಿತಿದ್ದ ಯುವತಿ ದಾರಿ ಕಾಣದೆ ಬುಳ್ಳಸಂದ್ರ ದಲ್ಲಿರುವ ಸಿದ್ದಲಿಂಗಪ್ಪನ ಮನೆಯ ಮುಂದೆ ನ್ಯಾಯಕ್ಕಾಗಿ ಧರಣಿ ನಡೆಸಿ, ಯುವಕನ ಕುಟುಂಬಸ್ಥರೆ ಈ ಮದುವೆ ಇಷ್ಟವಿಲ್ಲದಿರುವುದರಿಂದ ಬೇರೆ ಮದುವೆ ಮಾಡಲು ಆತನನ್ನು ಬಚ್ಚಿಟ್ಟಿದ್ದಾರೆ. ಹಾಗಾಗಿ ಗಂಡ ಮತ್ತು ತನಗೆ ನ್ಯಾಯ ದೊರಕಿಸಿ ಕೊಡುವಂತೆ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಯುವತಿ ತಿಳಿಸಿದ್ದಾಳೆ.
ಯುವಕನ ತಂದೆ ದೊಡ್ಡಯ್ಯ ಮಾತನಾಡಿ, ಮದುವೆ ವಿಷಯದ ಬಗ್ಗೆ ನಮಗೇನು ತಿಳಿದಿಲ್ಲ. ನನ್ನ ಮಗ ಎಲ್ಲಿದ್ದಾನೋ ಗೊತ್ತಿಲ್ಲ. ನನ್ನ ಬಳಿ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಿವೇಶನ ಖರೀದಿ ಮಾಡುವುದಾಗಿ ಹೇಳಿ 3 ಲಕ್ಷ ರೂ.ಗಳನ್ನು ಪಡೆದು ಹೋದವನು ವಾಪಸ್ಸು ಬಂದಿಲ್ಲ ಎನ್ನುತ್ತಾರೆ.
ಏನೇ ಆದ್ರೂ ಫೇಸ್‍ಬುಕ್ ಮೂಲಕ ಶುರುವಾದ ಪ್ರೀತಿಯು ಯುವತಿಯ ಹೊಟ್ಟೆಯಲ್ಲಿರೋ ಮಗುವಿಗೆ ತಂದೆ ಇಲ್ಲದಂತೇ ಮಾಡಿರೋದು ವಿಪರ್ಯಾಸವೇ ಸರಿ. ಪ್ರೀತಿಯ ಹೆಸರಲ್ಲಿ ಮೋಸ ಹೋಗೋ ಯುವತಿಯರು ಇನ್ನಾದರೂ ಎಚ್ಚೆತ್ತುಕೊಳ್ಳಲಿ. ನಡು ನೀರಲ್ಲಿ ಕೈಬಿಟ್ಟ ಭಂಡ ಗಂಡ ಸಿದ್ದಲಿಂಗಪ್ಪ, ಯುವತಿಯ ಜೀವನದ ಆಸರೆಯಾಗಲೆ ಬೇಕು ಎನ್ನುವ ಮಾತುಗಳು ಗ್ರಾಮಸರಿಂದ ಕೇಳಿ ಬಂದಿವೆ.